ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ 17 ರಿಂದ 21ರ ವರೆಗೆ ಮಹಾಶಿವರಾತ್ರಿ ಜಾತ್ರೆ ನಡೆಯಲಿದ್ದು ಭಕ್ತಸಾಗರವೇ ಹರಿದು ಬರುತ್ತಿದೆ. ಮಾದಪ್ಪನ ಬೆಟ್ಟಕ್ಕೆ ಬೆಂಗಳೂರು, ರಾಮನಗರ, ಮಂಡ್ಯ, ಕನಕಪುರ ಸೇರಿದಂತೆ ಅನೇಕ ಕಡೆಗಳಿಂದ ಆಗಮಿಸುತ್ತಿರುವ ಜನರು ಕಾವೇರಿ ಸಂಗಮದಲ್ಲಿ ನದಿ ದಾಟುತ್ತಿರುವುದು ಜನಪ್ರವಾಹದಂತೆ ಭಾಸವಾಗುತ್ತಿದೆ.
ಹೌದು, ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಶಿವರಾತ್ರಿ ಜಾತ್ರೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಭಕ್ತರು ನದಿ ದಾಟಿ ಬರುತ್ತಿದ್ದಾರೆ. ಇವರಿಗೆ ಸ್ಥಳೀಯರು ಮಜ್ಜಿಗೆ, ಪಾನಕ ವಿತರಿಸುತ್ತಿದ್ದಾರೆ. ಕಳೆದ ಬಾರಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ವೇಳೆ ಕಾವೇರಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿ ಮೂವರು ಭಕ್ತರು ನಾಪತ್ತೆಯಾಗಿದ್ದ ಹಿನ್ನೆಲೆ ಈ ಬಾರಿ ರಾಮನಗರ ಜಿಲ್ಲಾಡಳಿತದ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಆರಂಭ: 2 ವರ್ಷಗಳ ಬಳಿಕ ಕಳೆಗಟ್ಟಿದ ಸಂಭ್ರಮ
ನುರಿತ ಈಜುಗಾರರ ನೇಮಕ: ಕಳೆದ ವರ್ಷ ನದಿ ನೀರು ಏಕಾಏಕಿ ಹೆಚ್ಚಾದ ಪರಿಣಾಮ ಕೆಲವು ಭಕ್ತರು ನೀರಿನಲ್ಲಿ ತೇಲಿ ಹೋಗಿದ್ದರೆ ಇನ್ನೂ ಕೆಲವರು ನಾಪತ್ತೆಯಾಗಿದ್ದರು. ಈ ಬಾರಿ ಇಂತಹ ಘಟನೆಗಳು ಮರುಕಳಿಸಿದಂತೆ ಹಾಗೂ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೀರಿನ ಹೊರಹರಿವನ್ನು ನಿಲ್ಲಿಸಲಾಗಿದ್ದು, ಪಾದಯಾತ್ರಿಗಳ ಸುರಕ್ಷತೆಗೆ 20 ನುರಿತ ಈಜುಗಾರರನ್ನು ನೇಮಿಸಲಾಗಿದೆ.