ಚಾಮರಾಜನಗರ: ಚಾಮರಾಜನಗರದ ಆರಾಧ್ಯ ದೈವ ಶ್ರೀ ಚಾಮರಾಜೇಶ್ವರನಿಗೆ ಬೆಂಗಳೂರಿನ ನಿವಾಸಿಯೊಬ್ಬರು ಇಂದು 6 ಲಕ್ಷ ರೂ.ಗೂ ಹೆಚ್ಚು ಬೆಲೆ ಬಾಳುವ ಬೆಳ್ಳಿ ಕೊಳಗ (ಮುಖವಾಡ)ವನ್ನು ನೀಡಿದ್ದಾರೆ.
ಮೂಲತಃ ಚಾಮರಾಜನಗರದವರೇ ಆದ ಅರುಣ್ ಸುಬ್ರಹ್ಮಣ್ಯ ಪ್ರಸ್ತುತ ಬೆಂಗಳೂರಿನ ನಿವಾಸಿಯಾಗಿದ್ದಾರೆ. ಚಾಮರಾಜೇಶ್ವರನ ಭಕ್ತರಾಗಿದ್ದಾರೆ. ಚೆಂದದ ಬಾಳು ಕಟ್ಟಿಕೊಳ್ಳಲು ದೇವರ ಕೃಪೆಯೇ ಕಾರಣ ಎಂದು ನಂಬಿರುವ ಇವರು, ತಾವಂದುಕೊಂಡ ಇಷ್ಟಾರ್ಥ ಈಡೇರಿದ ಹಿನ್ನೆಲೆ ಇಂದು ಕುಟುಂಬ ಸಮೇತರಾಗಿ ಆಗಮಿಸಿ 5.5 ಕೆಜಿಯಷ್ಟು ತೂಕದ ಬೆಳ್ಳಿ ಮುಖವಾಡವನ್ನು ಸ್ವಾಮಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಚಾಮರಾಜೇಶ್ವರನಿಗೆ 5.5 ಕೆಜಿ ಬೆಳ್ಳಿ ಕೊಳಗ ಅರ್ಪಿಸಿದ ಭಕ್ತ ಈ ಕುರಿತು ಈಟಿವಿ ಭಾರತದೊಂದಿಗೆ ಅರುಣ್ ಸುಬ್ರಹ್ಮಣ್ಯ ಮಾತನಾಡಿ, ಚಾಮರಾಜನಗರವೇ ನನ್ನ ಹುಟ್ಟೂರು. ಚಾಮರಾಜೇಶ್ವರನೇ ಆರಾಧ್ಯ ದೈವ. ಬೆಂಗಳೂರಿನಲ್ಲಿ ನೆಲೆಸಿದ ಬಳಿಕ ವರ್ಷಕ್ಕೊಮ್ಮೆ ದೇಗುಲಕ್ಕೆ ಭೇಟಿ ನೀಡುತ್ತಿದ್ದೆವು. ದೇವರಿಗೆ ಏನು ನೀಡಿಲ್ಲವಾದ್ದರಿಂದ ಇಂದು ಬೆಳ್ಳಿ ಕೊಳಗ ಅರ್ಪಿಸಿದ್ದೇವೆ.
ಚಾಮರಾಜನಗರದಲ್ಲಿ ಹುಟ್ಟಿದವರು, ಚಾಮರಾಜನಗರದೊಂದಿಗೆ ಬಾಂಧವ್ಯ ಇಟ್ಟುಕೊಂಡವರು ದೇಗುಲಕ್ಕೆ ಕೊಡುಗೆಗಳನ್ನು ನೀಡಬೇಕು, ಅಭಿವೃದ್ಧಿಗೆ ಶ್ರಮಿಸಬೇಕೆಂದು ಕೋರಿದರು. ಇನ್ನು, ದೇವಾಲಯ ಪಾರುಪತ್ತೆಗಾರ ರಾಜಣ್ಣ ಪ್ರತಿಕ್ರಿಯಿಸಿ, ಬೆಂಗಳೂರಿನ ನಿವಾಸಿ ಅರುಣ್ ಅವರು ಕಾಣಿಕೆ ನೀಡುತ್ತೇವೆಂದು ತಿಳಿಸಿದಾಗ, ಶುಭ ಮಹೂರ್ತಕ್ಕಾಗಿ ಕಾದು ಇಂದು ದೇವಾಲಯ ಸುಪರ್ದಿಗೆ ತೆಗೆದುಕೊಂಡೆವು.
ಚಾಮರಾಜೇಶ್ಚರನಿಗೆ ಮೈಸೂರಿನ ಯದುವಂಶಸ್ಥರು ಬಿಟ್ಟರೇ ಇದೇ ಎರಡನೇ ಬೆಳ್ಳಿ ಕೊಳಗ ಕಾಣಿಕೆ ರೂಪದಲ್ಲಿ ಬಂದಿರುವುದು. ಭಕ್ತಾದಿಗಳು ದೇವಾಲಯ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.