ಗಂಗಾವತಿ :ಅಂಜನಾದ್ರಿ ಬೆಟ್ಟದಲ್ಲಿ 'ವಿಶ್ವ ಸಂತ ಮೇಳ' ಆಯೋಜಿಸುವುದಾಗಿ ರಾಜ್ಯಾದ್ಯಾಂತ ದೇಣಿಗೆ ಸಂಗ್ರಹಿಸುತ್ತಿರುವ ಪ್ರಧಾನ ಅರ್ಚಕ ಮತ್ತು ಇಬ್ಬರು ಕಾಂಗ್ರೆಸ್ ಮುಖಂಡರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿ ಭಕ್ತರು ದೂರು ಸಲ್ಲಿಸಿದ್ದಾರೆ.
ರಾಮಚಂದ್ರಪ್ಪ, ಚಂದ್ರು ಸೇರಿದಂತೆ ಒಟ್ಟು ಆರು ಜನ ಭಕ್ತರು, ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಲಿಖಿತ ದೂರು ಸಲ್ಲಿಸಿದ್ದಾರೆ. ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಹಾಗೂ ಕಾಂಗ್ರೆಸ್ ಮುಖಂಡರಾದ ಬಸವರಾಜಸ್ವಾಮಿ ಮಳೇಮಠ ಮತ್ತು ರಾಜು ನಾಯಕ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಮುಜುರಾಯಿ ಆಡಳಿತಕ್ಕೆ ಒಳಪಟ್ಟಿರುವ ಐತಿಹಾಸಿಕ ಅಂಜನಾದ್ರಿ ದೇವಸ್ಥಾನದ ಹೆಸರು ದುರುಪಯೋಗ ಮಾಡಿಕೊಂಡು, ಸಾಧು ಸಮ್ಮೇಳನ ಮಾಡುವುದಾಗಿ ರಾಜ್ಯದಾದ್ಯಂತ ದೇಣಿಗೆ ಸಂಗ್ರಹಕ್ಕೆ ಇವರು ಮುಂದಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾನೂನು ಕ್ರಮಕ್ಕೆ ಮಾಜಿ ಶಾಸಕ ಆಗ್ರಹ : ತಾಲೂಕಿನ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿ ದೇಗುಲದ ವ್ಯಾಪ್ತಿಯಲ್ಲಿ ನಕಲಿ ಟ್ರಸ್ಟ್ಗಳ ಹಾವಳಿ ಅಧಿಕವಾಗಿದೆ. ಕಾನೂನು ಕ್ರಮಕ್ಕೆ ಮಾಜಿ ಶಾಸಕ ಹೆಚ್ ಆರ್ ಶ್ರೀನಾಥ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.