ಕರ್ನಾಟಕ

karnataka

ETV Bharat / state

ಚಾಮರಾಜನಗರದ ನಾಲ್ಕು ಕ್ಷೇತ್ರದಲ್ಲಿ ನಾನಾ ಕಸರತ್ತು: ಅಭ್ಯರ್ಥಿಗಳ ನಡುವೆ ಪೈಪೋಟಿ - Chamarajanagar constituencies

ಚಾಮರಾಜನಗರದ ನಾಲ್ಕು ಕ್ಷೇತ್ರದಲ್ಲಿ ನಾನಾ ಪಕ್ಷಗಳ ಅಭ್ಯರ್ಥಿಗಳು ನಾನಾ ರೀತಿಯಲ್ಲಿ ಕಸರತ್ತು ನಡೆಸಿದ್ದಾರೆ. ಚಾಮರಾಜನಗರ‌, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ಮತಕ್ಷೇತ್ರದಲ್ಲಿ ಬಿರುಸಿನ ಪೈಪೋಟಿ ನಡೆದಿದೆ. ತಂತ್ರ, ಪ್ರತಿ ತಂತ್ರ, ಪ್ರಚಾರದಲ್ಲಿರುವ ಆಯಾ ಪಕ್ಷಗಳ ಅಭ್ಯರ್ಥಿಗಳು, ಫಲಿತಾಂಶಕ್ಕೂ ಮುನ್ನ ಗೆಲ್ಲುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

Calculation Of Assembly Constituency
Calculation Of Assembly Constituency

By

Published : May 1, 2023, 8:17 PM IST

Updated : May 1, 2023, 8:49 PM IST

ಚಾಮರಾಜನಗರ:ಚಾಮರಾಜನಗರ ಕರ್ನಾಟಕದ ದಕ್ಷಿಣ ಭಾಗದ ಕೊನೆಯ ಜಿಲ್ಲೆ. ತಮಿಳುನಾಡು, ಕೇರಳ ಗಡಿಯನ್ನು ಹಂಚಿಕೊಂಡು, ಪರಿಸರ ಸಂಪತ್ತು, ಜಾನಪದ ಸಂಸ್ಕೃತಿಯನ್ನು ಕಾಪಿಟ್ಟುಕೊಂಡ ಬಂದ ಪ್ರದೇಶವಾಗಿದ್ದು, ರಾಜಕೀಯ ಜಿದ್ದಾಜಿದ್ದಿಯಿಂದಲೂ ಗಮನ ಸೆಳೆಯುತ್ತಿದೆ. ಚಾಮರಾಜನಗರ‌, ಗುಂಡ್ಲುಪೇಟೆ, ಕೊಳ್ಳೇಗಾಲ (ಮೀಸಲು) ಹಾಗೂ ಹನೂರು ಎಂಬ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಸದ್ಯ ಈ ಕ್ಷೇತ್ರಗಳು ರಾಜಕೀಯ ಅಖಾಡವಾಗಿ ಮಾರ್ಪಟ್ಟಿವೆ.

ಹಾಲಿ ಶಾಸಕರು ಯಾರ್ಯಾರು?: ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಎರಡು ಕ್ಷೇತ್ರ ಬಿಜೆಪಿಯ ತೆಕ್ಕೆಯಲ್ಲಿದ್ದರೆ ಎರಡು ಕ್ಷೇತ್ರ ಕಾಂಗ್ರೆಸ್ ಕಪಿಮುಷ್ಠಿಯಲ್ಲಿವೆ. ಚಾಮರಾಜನಗರದಲ್ಲಿ ಸತತ ಮೂರು ಸಾಲಿನಿಂದ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಇದ್ದರೆ, ಹನೂರು ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಿಂದ ಕೈ ಪಕ್ಷದ ಆರ್‌.ನರೇಂದ್ರ ಆಯ್ಕೆಯಾಗಿದ್ದಾರೆ. ಕೊಳ್ಳೇಗಾಲದಲ್ಲಿ ಬಿಎಸ್ಪಿಯಿಂದ ಉಚ್ಛಾಟನೆಗೊಂಡು ಈಗ ಬಿಜೆಪಿಯಲ್ಲಿರುವ ಶಾಸಕ ಎನ್‌. ಮಹೇಶ್​ ಇದ್ದರೆ, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಜಯಿಸಿ ಬಂದಿರುವ ಬಿಜೆಪಿ ಸಿ.ಎಸ್. ನಿರಂಜನಕುಮಾರ್​ ಶಾಸಕರಾಗಿದ್ದಾರೆ.

ಕಳೆದ ಬಾರಿಯ ಚಾಮರಾಜನಗರ‌ ಕ್ಷೇತ್ರದ ಚುನಾವಣಾ ಫಲಿತಾಂಶ: ಕಳೆದ ಚುನಾವಣೆಯಲ್ಲಿ ಚಾಮರಾಜನಗರ‌ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ 75,963 ಮತ ಪಡೆದಿದ್ದರೆ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನಪ್ಪ 71,050 ಮತ ಪಡೆದಿದ್ದರು. ಪುಟ್ಟರಂಗಶೆಟ್ಟಿ 4,913 ಮತಗಳಿಂದ ಗೆಲುವು ಕಂಡಿದ್ದರು.

ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ ಕ್ಷೇತ್ರದ ಮತದಾರರ ಸಂಖ್ಯೆ:ಚಾಮರಾಜನಗರ ಕ್ಷೇತ್ರದಲ್ಲಿ ಒಟ್ಟು 2,09,494 ಮತದಾರರಿದ್ದಾರೆ. ಅದರಲ್ಲಿ ಪುರುಷರು 1,02,588 ಹಾಗೂ ಮಹಿಳೆಯರು 1,06,891 ಮತದಾರರಿದ್ದಾರೆ. ವೀರಶೈವ, ದಲಿತ, ನಾಯಕ ಹಾಗೂ ಉಪ್ಪಾರ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ವಿ. ಸೋಮಣ್ಣ

ಈ ಬಾರಿ ಸ್ಪರ್ಧೆಗಿಳಿದ ಅಭ್ಯರ್ಥಿಗಳು:ಚಾಮರಾಜನಗರ ಜಿಲ್ಲೆಯಿಂದ ಸ್ಪರ್ಧಿಸಬೇಕೆಂಬ ವಸತಿ ಸಚಿವ ವಿ. ಸೋಮಣ್ಣ ಅವರ ಬಹುಕಾಲದ ಕನಸು ಈ ಬಾರಿ ನನಸಾಗಿದೆ. ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಬಿಟ್ಟುಕೊಟ್ಟು, ಗಡಿ ಜಿಲ್ಲೆ ಚಾಮರಾಜನಗರ ರಾಜಕೀಯ ಅಖಾಡಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಸಹಜವಾಗಿ ಕ್ಷೇತ್ರ ರಾಜಕೀಯ ರಂಗು ಪಡೆದುಕೊಂಡಿದೆ. ಬಿಜೆಪಿಯಿಂದ ಸಚಿವ ವಿ. ಸೋಮಣ್ಣ ಕಣಕ್ಕಿಳಿದರೆ, ಕಾಂಗ್ರೆಸ್​ನಿಂದ ಪುಟ್ಟರಂಗಶೆಟ್ಟಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಜೆಡಿಎಸ್​ನಿಂದ ಆಲೂರು ಮಲ್ಲು ಕಣಕ್ಕಿಳಿದರೆ, ಪಕ್ಷೇತರರಾಗಿ ವಾಟಾಳ್ ನಾಗರಾಜ್, ಬಿಎಸ್ಪಿಯಿಂದ ಹ.ರಾ. ಮಹೇಶ್ ಎನ್ನುವವರು ಸ್ಪರ್ಧೆಯೊಡ್ಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್​ನ ಸಿ.ಪುಟ್ಟರಂಗಶೆಟ್ಟಿ ಮತ್ತು ಬಿಜೆಪಿಯ ವಿ. ಸೋಮಣ್ಣ ನಡುವೆ ನೇರ ಹಣಾಹಣಿ ಕಂಡುಬರುತ್ತಿದ್ದು, ಇಬ್ಬರ ನಡುವೆ ಪ್ರಬಲ ಪೈಪೋಟಿ ಇದೆ. ಇತರೆ ಅಭ್ಯರ್ಥಿಗಳು ಕೂಡ ಪೈಪೋಟಿ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅವರನ್ನು ಕೂಡ ಅಷ್ಟು ಸರಳವಾಗಿ ತೆಗೆದುಕೊಳ್ಳುವಂತಿಲ್ಲ ಎಂಬ ವಾತಾವರಣವೂ ಇದೆ ಎನ್ನುತ್ತಿದ್ದಾರೆ ಸ್ಥಳೀಯ ರಾಜಕೀಯ ವಿಶ್ಲೇಷಕರು.

ಸಿ.ಎಸ್.ನಿರಂಜನಕುಮಾರ್​

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ:ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು ಬಿಜೆಪಿ ಅಭ್ಯರ್ಥಿಗೆ ಬಂಡಾಯದ ಬಿಸಿ ಎದುರಾಗಿದೆ.‌ ಈ ಬಾರಿ ಕಾಂಗ್ರೆಸ್​ನಿಂದ ಹೆಚ್.ಎಂ. ಗಣೇಶ್ ಪ್ರಸಾದ್, ಬಿಜೆಪಿಯಿಂದ ಹಾಲಿ ಶಾಸಕ ನಿರಂಜನ್ ಕುಮಾರ್, ಜೆಡಿಎಸ್​ನಿಂದ ಕಡಬೂರು ಮಂಜುನಾಥ್, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಂ.ಪಿ‌. ಸುನೀಲ್ ಕುಮಾರ್ ಕಣದಲ್ಲಿದ್ದಾರೆ. ಇನ್ನುಳಿದಂತೆ ಜೆಡಿಎಸ್​, ಆಪ್​, ಬಿಎಸ್​ಪಿ, ಕೆಆರ್​ಎಸ್​ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಗಣೇಶ್ ಪ್ರಸಾದ್

ಕ್ಷೇತ್ರದ ಕಳೆದ ಬಾರಿಯ ಚುನಾವಣಾ ಫಲಿತಾಂಶ:ಬಿಜೆಪಿ ಅಭ್ಯರ್ಥಿ ಸಿ.ಎಸ್‌. ನಿರಂಜನ್ ಕುಮಾರ್ 94,151 ಮತ ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವಪ್ರಸಾದ್ 77,467 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದರು. 16 ಸಾವಿರ ಅಂತರದಿಂದ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಗೆಲುವು ಕಂಡಿದ್ದರು. ನಿರಂಜನಕುಮಾರ್ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಕಾಂಗ್ರೆಸ್​ನ ಹೆಚ್.ಎಂ. ಗಣೇಶ್ ಪ್ರಸಾದ್ ಪ್ರಬಲ ಸ್ಪರ್ಧಿಯಾಗಿದ್ದಾರೆ.

ಒಟ್ಟು ಮತದಾರರ ಸಂಖ್ಯೆ: ಕ್ಷೇತ್ರದಲ್ಲಿ ಒಟ್ಟು 2,13,836 ಮತದಾರರಿದ್ದಾರೆ. ಅದರಲ್ಲಿ 1,05,020 ಪುರುಷರು ಹಾಗೂ 1,08,797 ಮಹಿಳಾ ಮತದಾರರಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರೇ ಪ್ರಬಲವಾಗಿದ್ದು, ಅವರೊಂದಿಗೆ ದಲಿತ, ನಾಯಕ, ಉಪ್ಪಾರ, ಅಲ್ಪಸಂಖ್ಯಾತರು ಕೂಡ ಸಮಬದಲ್ಲಿದ್ದಾರೆ.

ಎನ್.ಮಹೇಶ್

ಕೊಳ್ಳೇಗಾಲ (ಮೀಸಲು) ಕ್ಷೇತ್ರ:ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಬಿಜೆಪಿ ಶಾಸಕ ಎನ್. ಮಹೇಶ್ ಅವರನ್ನು ಸೋಲಿಸಲೇಬೇಕೆಂದು ಬಿಎಸ್​ಪಿ ಪಣತೊಟ್ಟು ನಾಮಪತ್ರ ವಾಪಸ್ ಪಡೆದು ಕೈಗೆ ಬೆಂಬಲ ಕೊಟ್ಟಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಎನ್. ನಂಜುಂಡಸ್ವಾಮಿ ಕಾಂಗ್ರೆಸ್​ಗೆ ಸೇರ್ಪಡೆಗೊಂಡು ಕೈ ಅಭ್ಯರ್ಥಿ ಎ.ಆರ್‌. ಕೃಷ್ಣಮೂರ್ತಿ ಪರ ಮತಬೇಟೆ ನಡೆಸುತ್ತಿದ್ದಾರೆ. ಜೆಡಿಎಸ್​ನಿಂದ ಬಿ. ಪುಟ್ಟಸ್ವಾಮಿ ಕಣದಲ್ಲಿದ್ದಾರೆ. ಉಳಿದಂತೆ ಆಪ್​, ಕರ್ನಾಟಕ ಪ್ರಜಾ ಪಾರ್ಟಿ, ಕರ್ನಾಟಕ ಜನತಾ ಪಕ್ಷ, ಕೆಆರ್​ಎಸ್​, ಪ್ರಜಾಕೀಯ, ಭಾರತೀಯ ಬೆಳಕು ಪಾರ್ಟಿ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ‌ ಸ್ಪರ್ಧೆ ಇದೆ.

ಎ.ಆರ್‌.ಕೃಷ್ಣಮೂರ್ತಿ

2018ರ ಚುನಾವಣಾ ಫಲಿತಾಂಶ:ಬಿಎಸ್ಪಿಯಿಂದ ಸ್ಪರ್ಧಿಸಿದ್ದ(ಈಗ ಬಿಜೆಪಿ) ಎನ್. ಮಹೇಶ್ 71,792 ಮತ ಪಡೆದು ಗೆಲುವು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ 52,338 ಮತ ಪಡೆದು 2ನೇ ಸ್ಥಾನಕ್ಕೆ ಕುಸಿದರೆ, ಬಿಜೆಪಿ ಅಭ್ಯರ್ಥಿ ಜಿ.ಎನ್. ನಂಜುಂಡಸ್ವಾಮಿ 39,690 ಮತ ಪಡೆದು 3ನೇ ಸ್ಥಾನ ಪಡೆದರು. ಎನ್. ಮಹೇಶ್ ಅವರು ಈ ಚುನಾವಣೆಯಲ್ಲಿ 19 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಮತದಾರರ ವಿವರ:ಒಟ್ಟು ಮತದಾರರ ಸಂಖ್ಯೆ 2,16,602. ಇದರಲ್ಲಿ ಪುರುಷರು 1,06,979, ಮಹಿಳೆಯರು 1,09,604 ಮತದಾರರಿದ್ದಾರೆ.

ಆರ್‌.ನರೇಂದ್ರ

ಹನೂರು ವಿಧಾನಸಭಾ ಕ್ಷೇತ್ರ:ದಿ.ನಾಗಪ್ಪ ಕುಟುಂಬ ಹಾಗೂ ದಿ.ರಾಜುಗೌಡ ಕುಟುಂಬ ಎಂಬ ಎರಡು ಕುಟುಂಬಗಳೇ ರಾಜಕೀಯ ಪಾರಮ್ಯ ಮೆರೆಯುತ್ತಿರುವ ಕ್ಷೇತ್ರ ಇದಾಗಿದ್ದು ಇದುವರೆಗೆ ಈ‌ ಎರಡು ಕುಟುಂಬಗಳ ನಡುವೆ ಹೆಚ್ಚು ಅಧಿಕಾರ ಹಂಚಿಕೆಯಾಗಿದೆ.‌ ಕಳೆದ ಮೂರು ಬಾರಿಯಿಂದ ಕಾಂಗ್ರೆಸ್​ನ ಹಾಲಿ ಶಾಸಕ ಆರ್.ನರೇಂದ್ರ ಆರಿಸಿ ಬಂದಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಬಿರುಸಿನ ಪೈಪೋಟಿ ಕೊಡುತ್ತಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಎಂ.ಆರ್.ಮಂಜುನಾಥ್

2018ರ ಫಲಿತಾಂಶ:ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಆರ್.ನರೇಂದ್ರ 60,444 ಮತ ಪಡೆದು ವಿಧಾನಸಭೆ ಪ್ರವೇಶ ಮಾಡಿದರೆ, ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ 56,931 ಮತ ದ್ವಿತೀಯ ಸ್ಥಾನ ಕುಸಿದಿದ್ದರು. ಜೆಡಿಎಸ್ ಅಭ್ಯರ್ಥಿ ಎಂ.ಆರ್. ಮಂಜುನಾಥ್ 44,957 ಮತ ಪಡೆದು ಸ್ಥಾನ ಮೂರರಲ್ಲಿ ಬಂದರು. 3,700 ಮತಗಳ ಅಂತರದಿಂದ ಕೈ ಶಾಸಕ ಆರ್.ನರೇಂದ್ರಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಇದೀಗ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ.

ಪ್ರೀತನ್ ನಾಗಪ್ಪ

ಮತದಾರರ ವಿವರ: ಕ್ಷೇತ್ರದಲ್ಲಿಒಟ್ಟು 2,21,557 ಮತದಾರರಿದ್ದಾರೆ. ಇದರಲ್ಲಿ 1,11,960 ಪುರುಷ ಮತದಾರರು, 1,09,581 ಮಹಿಳಾ ಮತದಾರರು ಇದ್ದಾರೆ. ಲಿಂಗಾಯತ ಸಮುದಾಯ ಇಲ್ಲಿ ನಿರ್ಣಾಯಕ. ಕಳೆದ (2018) ಚುನಾವಣೆಯಲ್ಲಿ ಕಣದಲ್ಲಿದ್ದ ಆರ್. ನರೇಂದ್ರ (ಕಾಂಗ್ರೆಸ್), ಡಾ. ಪ್ರೀತನ್ ನಾಗಪ್ಪ (ಬಿಜೆಪಿ) ಹಾಗೂ ಎಂ.ಆರ್. ಮಂಜುನಾಥ್ (ಜೆಡಿಎಸ್) ಅವರೇ ಈ (2023) ಚುನಾವಣೆಯಲ್ಲಿ ಮತ್ತೆ ಪುನರಾವರ್ತನೆಯಾಗಿದ್ದಾರೆ. ಕ್ಷೇತ್ರದಲ್ಲಿ ತ್ರೀಕೋನ ಸ್ಪರ್ಧೆ ಇದೆ.

ಇದನ್ನೂ ಓದಿ:ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ.. 110 ಕ್ಷೇತ್ರದಲ್ಲಿ ಪ್ರಜಾಕೀಯ ಸ್ಪರ್ಧೆ - ಉಪೇಂದ್ರ ಮಾಹಿತಿ

Last Updated : May 1, 2023, 8:49 PM IST

ABOUT THE AUTHOR

...view details