ಚಾಮರಾಜನಗರ: ಗುಂಡ್ಲುಪೇಟೆ ಸಿಪಿಐ ಹಾಗೂ ಪಿಎಸ್ಐ ಭ್ರಷ್ಟಾಚಾರ ಹಾಗೂ ದಬ್ವಾಳಿಕೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿ ಗುಂಡ್ಲುಪೇಟೆ ಠಾಣೆಯ ಮುಂದೆಯೇ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಠಾಣೆ ಮುಂದೆ ಪ್ರತಿಭಟಿಸಿ, ಗುಂಡ್ಲುಪೇಟೆ ತಾಲೂಕಿನಾದ್ಯಂತ ಹಲವು ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಸಿಪಿಐ ಮಹದೇವಸ್ವಾಮಿ ಪಿಎಸ್ಐ ಲತೇಶ್ ಕುಮಾರ್ ಯಾವುದೇ ಕ್ರಮವಹಿಸಿದೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜಕೀಯ ವ್ಯಕ್ತಿಗಳ ಕೈಗೊಂಬೆಯಂತೆ ಇವರಿಬ್ಬರು ವರ್ತಿಸುತ್ತಿದ್ದು ಈ ರೀತಿಯ ಅಧಿಕಾರಿಗಳು ನಮಗೆ ಅವಶ್ಯಕತೆ ಇಲ್ಲಾ ಕೂಡಲೇ ಅವರನ್ನು ಅಮಾನತುಗೊಳಿಸಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಠಾಣೆಗೆ ಬರುವ ವ್ಯಕ್ತಿಗಳ ಮೇಲೆ ವಿನಾಕಾರಣ ದೂರು ದಾಖಲಿಸಿಕೊಂಡು ರೌಡಿಶೀಟರ್ ಪಟ್ಟಿಗೆ ಸೇರಿಸುವ ಬೆದರಿಕೆ ಒಡ್ಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿದ್ದು, ರಸ್ತೆಯಲ್ಲಿಯೇ ಅಧಿಕ ಭಾರಹೊತ್ತ ಲಾರಿಗಳು ಸಂಚರಿಸಿದರೂ ಕ್ರಮಕ್ಕೆ ಮುಂದಾಗಿಲ್ಲ. ಅಕ್ಕಿ ರವಾನೆ, ಗೋಹತ್ಯೆ, ಅಕ್ರಮ ದನಗಳ ಸಾಗಣೆ, ಜೂಜಾಟ ನಡೆಯುತ್ತಿದ್ದು ಇವುಗಳನ್ನು ತಡೆಯಲು ವಿಫಲರಾಗಿದ್ದಾರೆ. ಜೊತೆಗೆ, ಜನರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿಲ್ಲ ಎಂದು ದೂರಿದರು.
10 ದಿನದ ಗಡವು: ಠಾಣೆಗೆ ಮುತ್ತಿಗೆ ಹಾಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಬೇಕೆಂದು ರೈತರು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕಾಗಿಸಿದ ಎಸ್ಪಿ ಆನಂದ್ ಕುಮಾರ್, ಯಾರೇ ತಪ್ಪು ಮಾಡಿದರೂ ಅಂತವರ ವಿರುದ್ಧ ಕ್ರಮ ವಹಿಸಲಾಗುವುದು. ಸಂವಿಧಾನ ಎಲ್ಲರಿಗೂ ಒಂದೇ. ಈಗಾಗಲೇ ರೈತರು ನೀಡಿರುವ ದೂರುಗಳನ್ನು ಸ್ವೀಕರಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಜೊತೆಗೆ ಕಾನೂನಾತ್ಮಕವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಜೂನ್ 29ರ ವರೆಗೆ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಒಪ್ಪಿದ ರೈತರು, ರೈತರ ವಿರುದ್ಧ ದಾಖಲಿಸಲಾಗಿರುವ ಎಲ್ಲಾ ಕೇಸುಗಳನ್ನು ಹಿಂಪಡೆದು ಜೊತೆಗೆ ಮುಂದೆ ಇಂತಹ ಘಟನೆಗಳು ತಾಲ್ಲೂಕಿನಲ್ಲಿ ನಡೆಯದಂತೆ ಮುನ್ನೆಚರಿಕೆ ವಹಿಸಬೇಕು. ತಪ್ಪಿತಸ್ಥ ಪೊಲೀಸರ ವಿರುದ್ಧ ಶೀಘ್ರ ಕ್ರಮ ಜರುಗಿಸಿ ಅವರನ್ನು ಅಮಾನತು ಗೊಳಿಸಬೇಕು ಎಂದು ಅಹವಾಲು ಸಲ್ಲಿಸಿ ಅನಿರ್ಧಿಷ್ಟಾವಧಿ ಧರಣಿ ಹಿಂಪಡೆದರು.