ಕೊಳ್ಳೇಗಾಲ (ಚಾಮರಾಜನಗರ): ನರೀಪುರ- ಪಾಳ್ಯ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಕೊಳ್ಳೇಗಾಲ - ಬೆಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಕರ್ನಾಟಕ ರಾಜ್ಯ ರೈತ ಸಂಘ 45 ನಿಮಿಷ ಕಾಲ ತಡೆದು ಸರ್ಕಾರ ಮತ್ತು ಸ್ಥಳೀಯ ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಇದೇ ವೇಳೆ ಮಾತನಾಡಿದ ರೈತ ಮುಖಂಡ ಬಸವರಾಜು, ಕೊಳ್ಳೇಗಾಲ ತಾಲೂಕು ಹನೂರು ವಿಧಾನಸಭೆಗೆ ಸೇರಿರುವ ನರೀಪುರ-ಪಾಳ್ಯ ರಸ್ತೆ ಸಂಪೂರ್ಣ ಹದಗಿಟ್ಟಿದ್ದು. ಹಳ್ಳ, ಕೊಳ್ಳಗಳಿಂದ ಕೂಡಿದೆ. ದಿನ ನಿತ್ಯ ಜನರು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ 2019ರ ಡಿಸೆಂಬರ್ 25 ರಂದು ಶಾಸಕ ನರೇಂದ್ರ ಅವರು ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ್ದರು. 10 ತಿಂಗಳಾದರೂ ಕಾಮಗಾರಿ ಪ್ರಾರಂಭವಾಗಿಲ್ಲದ ಕಾರಣ ಪಕ್ಷಾತೀತವಾಗಿ ರೈತ ಸಂಘವೂ 'ನಮ್ಮ ರಸ್ತೆಗಾಗಿ ನಮ್ಮ ಹೋರಾಟ'ಶೀರ್ಷಿಕೆಯಡಿರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದೆ. ಭೂಮಿ ಪೂಜೆ ನೆರವೇರಿಸಿದ ಅಧಿಕಾರಿಗಳು ಹಾಗೂ ಶಾಸಕರು ಕಾಮಗಾರಿ ವಿಳಂಬ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಶಾಸಕರೇ ನಿನ್ನೆ ಪ್ರತಿಕಾಗೋಷ್ಠಿ ನಡೆಸಿ ಕಾಮಗಾರಿಯ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ, ಕಾಮಗಾರಿ ಪ್ರಾರಂಭಿಸಿ ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಿದರು. ಅವರು ಗುತ್ತಿಗೆಗಾರನನ್ನು ಸಿಎಂ ಕಚೇರಿಗೆ ಕಳುಹಿಸಿಕೊಡುವಂತೆ ಹೇಳುತ್ತಿದ್ದಾರೆ ನಾನೇನು ಮಾಡಲಿ ಎಂದು ಅಸಹಾಯಕತೆ ತೋರಿಸುತ್ತಿದ್ದಾರೆ. ಪ್ರಬಲ ಶಾಸಕನ ಸ್ಥಿತಿ ಈ ರೀತಿ ಆದರೆ ಜನ ಸಾಮಾನ್ಯರ ಕಷ್ಟ ಕೇಳುವರು ಯಾರು ಎಂದರು. ಶಾಸಕರು ಖುದ್ದು ಪ್ರತಿಭಟನಾ ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಭಾಗದ ಶಾಸಕರಾಗಿ 13 ವರ್ಷವಾಯಿತು. 5 ವರ್ಷ ಅವರದೆ ಕಾಂಗ್ರೆಸ್ ಸರ್ಕಾರ ಇತ್ತು. ಈ ಭಾಗದ ರಸ್ತೆಗಳನ್ನು ನಿರ್ಮಿಸಲು ಶಾಸಕ ನರೇಂದ್ರ ವಿಫಲರಾಗಿದ್ದಾರೆ. ಇಂತವರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ ಎಂದು ಕಟುವಾಗಿ ಟೀಕಿಸಿದರು.
45 ನಿಮಿಷ ರಸ್ತೆ ತಡೆದು ಪ್ರತಿಭಟಿಸಿದ ಪರಿಣಾಮ ಅಧಿಕ ವಾಹನದಟ್ಟನೆ ಉಂಟಾಯಿತು. ತಹಶೀಲ್ದಾರ್ ಕುನಾಲ್, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ಎಷ್ಟೆ ಕೇಳಿಕೊಂಡರು ರೈತ ಮುಖಂಡರು ಮಣಿಯದ ಹಿನ್ನೆಲೆಯಲ್ಲಿ 53 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಅಲ್ಲಿಂದ ಕರೆದೊಯ್ಯಲಾಯಿತು.