ಚಾಮರಾಜನಗರ:ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಇಂದು ಹಾಲರವಿ ಉತ್ಸವ ಬೇಡಗಂಪಣ ವಿಧಿವಿಧಾನದಂತೆ ಸಂಪ್ರದಾಯಬದ್ಧವಾಗಿ ನೆರವೇರಿತು.
ಪ್ರತಿ ವರ್ಷ ದೀಪಾವಳಿ ಜಾತ್ರೆಯ ಸಮಯದಲ್ಲಿ ಅಮಾವಾಸ್ಯೆಯ ದಿನ ಈ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿ ಲಕ್ಷಾಂತರ ಭಕ್ತರು ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸ್ಥಳೀಯ ಬೇಡಗಂಪಣ ಸಮುದಾಯದವರು ಮಾದೇಶ್ವರನಿಗೆ ನಡೆಸುವ ಭಕ್ತಿಪೂರ್ವಕ ಉತ್ಸವ ಇದಾಗಿದ್ದು, ಸಮುದಾಯದ 10 ರಿಂದ 12 ವರ್ಷದ 101 ಹೆಣ್ಣು ಮಕ್ಕಳು ಭಾಗಿಯಾಗುವುದು ವಿಶೇಷ.
ಉತ್ಸವದಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು ಉಪವಾಸವಿದ್ದು, ಬೆಳಗ್ಗೆ ಬೆಟ್ಟದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಹಾಲರವಿ ಬಾವಿಗೆ ತೆರಳಿ ಅಲ್ಲಿ ಸ್ನಾನ ಮಾಡುತ್ತಾರೆ. ನಂತರ ಹಿತ್ತಾಳೆಯ ಕಳಶದಲ್ಲಿ ಹಾಲರವಿ ಹಳ್ಳದ ನೀರು ತುಂಬಿ ತಲೆ ಮೇಲಿರಿಸಿ ಕಳಶಗಳಿಗೆ ಪೂಜೆ ನೆರವೇರಿಸುವರು. ಆ ಬಳಿಕ ಕಳಶ ಹೊತ್ತು ಕಾಲ್ನಡಿಗೆಯಲ್ಲೇ ಸಾಗಿ ಬೆಟ್ಟದ ಪ್ರವೇಶ ದ್ವಾರ ತಲುಪುತ್ತಾರೆ.