ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ವಿಚಿತ್ರ ಕಾಯಿಲೆಯೊಂದು ಮತ್ತೆ ಬೆಳಕಿಗೆ ಬಂದಿದ್ದು, ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಕಾಯಿಲೆಗೆ ತುತ್ತಾಗಿರುವ ಮಕ್ಕಳ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ಕೈ ಕಾಲು, ಮುಖದ ಮೇಲೆ ಕಪ್ಪು ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವ ರೋಗಕ್ಕೆ ಚುಕ್ಕಿ ಚರ್ಮರೋಗ ಎಂದು ಕರೆಯಲಾಗುತ್ತದೆ. ಇದು ಒಂದು ಬಾರಿ ಮಕ್ಕಳಿಗೆ ಅಂಟಿಕೊಂಡರೆ ಸಾವು ಖಚಿತ ಎಂಬ ಮಾತಿದ್ದು, ಈ ರೀತಿ ಮಾರಕ ಕಾಯಿಲೆ ಹನೂರು ತಾಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
2015ರಲ್ಲಿ ಇದೇ ಭಾಗದಲ್ಲಿ ಕಾಣಿಸಿಕೊಂಡಿದ್ದ ಆಟೋಇಮ್ಯೂನ್ ಕಾಯಿಲೆ (Autoimmune diseases) ಇದಾಗಿದೆ. ಈ ಚುಕ್ಕಿ ಚರ್ಮ ರೋಗದಿಂದ ಕೆಲ ಮಕ್ಕಳು ಸಾವನ್ನಪ್ಪಿದ್ದರು. ಸದ್ಯ ಔಷಧಿಯೇ ಇಲ್ಲದ ಈ ಕಾಯಿಲೆಗೆ ಸಣ್ಣ ಸಣ್ಣ ಕಂದಮ್ಮಗಳು ಹೈರಾಣಾಗಿದ್ದಾರೆ.
ಈ ಕಾಯಿಲೆಯ ಲಕ್ಷಣಗಳೇನು?.. ಮಕ್ಕಳಿಗೆ ಒಂಬತ್ತು ವರ್ಷ ತುಂಬಿದ ನಂತರ ಚರ್ಮದಲ್ಲಿ ಹುಣ್ಣು, ಬಿಳಿ ಮಚ್ಚೆ, ಚರ್ಮ ಕಪ್ಪು ಬಣ್ಣಕ್ಕೆ ತಿರುಗುವುದು, ಕಣ್ಣು ಊದಿಕೊಳ್ಳುವಿಕೆ ಈ ರೀತಿ ನಾನಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸದ್ಯ ಹನೂರು ಸುತ್ತಲಿನ 4 ಕ್ಕೂ ಹೆಚ್ಚಿನ ಮಕ್ಕಳಲ್ಲಿ ರೋಗ ಲಕ್ಷಣ ಪತ್ತೆಯಾಗಿದೆ. ಇತ್ತ ವೈದ್ಯರ ಪ್ರಕಾರ ಈ ರೋಗವು ಅನುವಂಶೀಕವಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಮಕ್ಕಳು ಶಾಲೆಗೆ ಹೋಗಲು ಸಹ ಹಿಂದೇಟು ಹಾಕುವ ಪರಿಸ್ಥಿತಿ ಸಹ ನಿರ್ಮಾಣವಾಗಿದೆ.
2015ರಲ್ಲಿ 8 ಮಕ್ಕಳ ಸಾವು: ಈ ಕಾಯಿಲೆ 2015 ರಲ್ಲಿ ಕಾಣಿಸಿಕೊಂಡಿದ್ದ ವೇಳೆ ಶೆಟ್ಟಹಳ್ಳಿ, ಕುರಟ್ಟಿಹೊಸೂರು ಗ್ರಾಮದಲ್ಲಿ 8 ಮಕ್ಕಳು ಅಸುನೀಗಿದ್ದರು. ಸದ್ಯ, ಗ್ರಾಮಗಳಿಗೆ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್, ಹನೂರು ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಮಾಹಿತಿ ನೀಡಿ, ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆಯಲಾಗಿದೆ, ಹಲವು ಪರೀಕ್ಷೆಗಳನ್ನು ನಡೆಸಬೇಕಿದೆ, ಬಾಲಕಿಯೊಬ್ಬಳ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದೆ. ಕಾಯಿಲೆ ಸಂಪೂರ್ಣ ಗುಣವಾಗಲು ಯಾವುದೇ ಔಷಧಿಗಳಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳೆಗೆ ಅಪರೂಪದ ಖಾಯಿಲೆ: ಕಿಮ್ಸ್ ವೈದ್ಯರಿಂದ ಮರುಜೀವ- ವಿಡಿಯೋ