ಚಾಮರಾಜನಗರ :ವರದಕ್ಷಿಣೆಗಾಗಿ ಪೀಡಿಸಿ ಮಗಳನ್ನು ಕೊಂದ 12 ದಿನಗಳಾದರೂ ಆರೋಪಿಗಳನ್ನು ಬಂಧಿಸಿಲ್ಲವೆಂದು ಆಕ್ರೋಶಗೊಂಡ ಮೃತಳ ಕುಟುಂಬಸ್ಥರು ಇಂದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರ ವಿರುದ್ಧ ಮೃತಳ ಕುಟುಂಬಸ್ಥರಿಂದ ಪ್ರತಿಭಟನೆ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಚಾಮರಾಜನಗರ ಡಿವೈಎಸ್ಪಿ ಕಚೇರಿ ಮುಂಭಾಗ ಜಮಾಯಿಸಿದ ಕೊತ್ತಲವಾಡಿ ಗ್ರಾಮಸ್ಥರು, ಮೃತಳ ಫೋಟೋ ಹಿಡಿದು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದರು. ಆರೋಪಿಗಳೊಟ್ಟಿಗೆ ಪೊಲೀಸರು ಶಾಮೀಲಾಗಿ ಬಂಧಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಗೆ ಕಾರಣ :ಕೊತ್ತಲವಾಡಿ ಗ್ರಾಮದ ದೇವಪ್ಪ ಎಂಬುವರ ಮಗಳು ದಿವ್ಯಾ (22) ಎಂಬಾಕೆಯನ್ನು 9 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಉಡಿಗಾಲ ಗ್ರಾಮದ ಜಯಶಂಕರ್ ಎಂಬಾತ ವರದಕ್ಷಿಣೆಗಾಗಿ ಪೀಡಿಸಿ ಕೊಲೆ ಮಾಡಿ ಪರಾರಿಯಾದ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಪತಿ ಜಯಶಂಕರ್, ಮಾವ ಸಿದ್ದಮಲ್ಲಪ್ಪ, ಅತ್ತೆ ಸುಂದ್ರಮ್ಮ, ಬಾವ ಚಂದ್ರಶೇಖರ್, ವಾರಗಿತ್ತಿ ರೇಖಾ ವಿರುದ್ಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಮೃತ ಯುವತಿಯ ಪೋಷಕರು ದೂರು ದಾಖಲಿಸಿದ್ದರು.
ಆದರೆ, ಘಟನೆ ನಡೆದು 12 ದಿನಗಳಾದರೂ ಪರಾರಿಯಾಗಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಇದರಿಂದ ಕೋಪಗೊಂಡ ಮೃತಳ ಕುಟುಂಬಸ್ಥರು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಬಳಿಕ ಪೊಲೀಸರು ಆದಷ್ಟು ಬೇಗ ಆರೋಪಿಯನ್ನ ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ.