ಚಾಮರಾಜನಗರ:ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಬೀಳುಬಿದ್ದ ಕಂದಾಯ ಇಲಾಖೆ ಜಮೀನಿನ ಪೊದೆಯಲ್ಲಿ ಹುಲಿ ಹಾಗೂ ಹುಲಿ ಮರಿಯ ಕಳೇಬರಗಳು ಪತ್ತೆಯಾಗಿದೆ. ಮೇಲ್ನೋಟಕ್ಕೆ ಹುಲಿ ಹಾಗೂ ಮರಿಯ ಕಳೇಬರ ಎಂಬುದು ದೃಢಪಟ್ಟಿದೆ.
ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಬಫರ್ ವಲಯ ವ್ಯಾಪ್ತಿಯಲ್ಲಿ ಹುಲಿಗಳ ಕಳೇಬರ ಕಂಡಿದ್ದು, ಸಂಪೂರ್ಣವಾಗಿ ಕೊಳೆತು ಹೋಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ.
ಪ್ರತ್ಯೇಕ ಪ್ರಕರಣ:- ಬೇಟೆಗೆ ಹೊಂಚು ಹಾಕಿತ್ತಿದ್ದವರ ಬಂಧನ: ಉರುಳು ಹಾಕಿ ವನ್ಯಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಣೆ ಹೊಲ ಗ್ರಾಮದ ದಡ ಬಂಡಿ ಮಾದಯ್ಯ (68), ನಾಗ ತಂಬಡಿ (53) ಬಂಧಿತ ಆರೋಪಿಗಳು. ಇವರು ಉರುಳು ಹಾಕಿ ವನ್ಯ ಪ್ರಾಣಿಗಳ ಬೇಟೆಗೆ ಹೊಂಚು ಹಾಕಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಲೆ ಮಹದೇಶ್ವರ ವನ್ಯಜೀವಿ ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ.
ಇದನ್ನೂ ಓದಿ:ಸಿಇಎನ್ ಪೊಲೀಸರ ದಾಳಿ: ಮಾದಕ ವಸ್ತು, ಹುಲಿ ಉಗುರು ವಶ, ಏಳು ಆರೋಪಿಗಳು ಅಂದರ್
ಕೊಳೆತ ಸ್ಥಿತಿಯಲ್ಲಿ ಆನೆ ಪತ್ತೆ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ನಾಗಣಾಪುರದ 2ನೇ ಬ್ಲಾಕ್ನಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ಗಂಡು ಕಾಡಾನೆ ಪತ್ತೆಯಾಗಿತ್ತು. ಹುಣಸೆತಾಳ ಕಂಡಿ ಅರಣ್ಯ ಪ್ರದೇಶದಲ್ಲಿ ಆನೆ ಮೃತದೇಹ ಕಂಡಿದ್ದು, ಆನೆಗೆ ಸುಮಾರು 40 ರಿಂದ 45 ವರ್ಷ ವಯಸ್ಸಾಗಿದ್ದು, ಮೃತಪಟ್ಟಿರುವ ಆನೆಯ 2 ದಂತವನ್ನು ಬೇರ್ಪಡಿಸಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಈ ಆನೆ ಸ್ವಾಭಾವಿಕವಾಗಿ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
ಇನ್ನು ಮೊನ್ನೆ ತಾನೇ ಚಾಮರಾಜನಗರದಲ್ಲಿ ಬೇರೆ ಹುಲಿಯೊಂದಿಗೆ ಕಾದಾಟದಲ್ಲಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಹುಲಿ ಮೃತಪಟ್ಟಿತ್ತು. ಈ ಹುಲಿಗೆ 3 ವರ್ಷಗಳಾಗಿದ್ದು, ಸರಹದ್ದಿನ ಕಾದಾಟದಲ್ಲಿ ಗಾಯಗೊಂಡಿತ್ತು. ಗಾಯಗೊಂಡ ಹುಲಿ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ ಸಮೀಪ ಕಾಣಿಸಿಕೊಂಡಿತ್ತು. ಮೊದಲೇ ನಿತ್ರಾಣಗೊಂಡಿದ್ದರಿಂದ ಚುಚ್ಚು ಮದ್ದು ಕೊಟ್ಟು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಹಿಂದೆ ಸರಿದಿದ್ದರು. ಹೀಗಾಗಿ ಅದನ್ನು ಬೋನಿನ ಮೂಲಕ ಸೆರೆ ಹಿಡಿದು ಚಿಕಿತ್ಸೆ ನೀಡಲು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಅರಣ್ಯ ಇಲಾಖೆಯ ಕಾರ್ಯಾಚರಣೆಗೂ ಮುನ್ನವೇ ಹುಲಿ ಸಾವನ್ನಪ್ಪಿತ್ತು.