ಕೊಳ್ಳೇಗಾಲ: ಶಾಸಕ ಎನ್.ಮಹೇಶ್ ಸ್ವಗ್ರಾಮ ಶಂಕನಪುರದ ರಸ್ತೆ ಹದಗೆಟ್ಟಿದ್ದು, ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಹಾಗಾಗಿ ಗ್ರಾಮದ ಜನತೆ ನಡುರಸ್ತೆಯಲ್ಲಿ ಭತ್ತ ನಾಟಿ ಮಾಡಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರ ಸ್ವಗ್ರಾಮಕ್ಕಿಲ್ಲ ಮೂಲಸೌಕರ್ಯ: ನಡುರಸ್ತೆಯಲ್ಲೇ ಭತ್ತ ನಾಟಿ ಮಾಡಿ ಆಕ್ರೋಶ - ನಡುರಸ್ತೆಯಲ್ಲಿ ಭತ್ತದ ನಾಟಿ
ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಪರಿಹರಿಸಬೇಕಾದ ಶಾಸಕ ಎನ್.ಮಹೇಶ್ ಸ್ವಗ್ರಾಮದಲ್ಲೇ ರಸ್ತೆಗಳು ಹದಗೆಟ್ಟಿವೆ. ದುರಸ್ತಿಗಾಗಿ ಆಗ್ರಹಿಸಿ ಜನತೆ ನಡುರಸ್ತೆಯಲ್ಲೇ ಭತ್ತ ನಾಟಿ ಮಾಡಿರುವ ಘಟನೆ ಕೊಳ್ಳೇಗಾಲದ ಶಂಕನಪುರದಲ್ಲಿ ನಡೆದಿದೆ.
ಬಾಪು ನಗರ ಹೆದ್ದಾರಿಯಿಂದ ಅಡ್ಡರಸ್ತೆಯಲ್ಲಿ ಶಂಕನಪುರ ಮಾರ್ಗವಾಗಿ ಹಂಪಾಪುರ ಸೇರುವ ಒಂದೂವರೆ ಕಿಲೋ ಮೀಟರ್ ರಸ್ತೆಯು ಹದಗೆಟ್ಟಿದೆ. ಇತ್ತೀಚೆಗೆ ನಿತ್ಯ ಸುರಿವ ಮಳೆಯಿಂದಾಗಿ ಹಳ್ಳ- ಗುಂಡಿಗಳು ತುಂಬಿ ಕೆಸರು ಗದ್ದೆಯಂತಾಗಿವೆ. ವಾಹನ ಸವಾರರಂತೂ ಹೈರಾಣಗಿದ್ದು, ಆಕ್ರೋಶಗೊಂಡ ರೈತರು ನಡುರಸ್ತೆಯಲ್ಲೇ ಭತ್ತ ನಾಟಿ ಮಾಡಿದ್ರು.
ಈ ವೇಳೆ ಮಾತನಾಡಿದ ಗ್ರಾಮಸ್ಥ ನಿಂಗರಾಜು, ಕಳೆದ ಆರು ವರ್ಷಗಳಿಂದ ಈ ರಸ್ತೆ ಹೀಗಿದೆ. ಯಾವೊಬ್ಬ ಜನಪ್ರತಿನಿಧಿಯೂ ಇತ್ತ ತಲೆ ಹಾಕಿಲ್ಲ. ಜೀವದ ಹಂಗು ತೊರೆದು ಪ್ರಯಾಣಿಸಬೇಕಿದೆ. ರಸ್ತೆ ದುರಸ್ತಿಯಾಗದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.