ಚಾಮರಾಜನಗರ: ಜಿಲ್ಲೆಯಲ್ಲಿ ಹೊಂದಿಕೊಂಡಿರುವ ಎಲ್ಲಾ ಅಂತಾರಾಜ್ಯ ಗಡಿಗಳಲ್ಲಿ ಮತ್ತಷ್ಟು ಬಿಗಿ ಮಾಡಲಿದ್ದು, ಎಲ್ಲಾ ಕಡೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಕೋವಿಡ್ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿ, ಕೇರಳದಿಂದ ಬರುವವರಿಗೆ ಮಾತ್ರ ಈಗ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಿದೆ. ಆದರೆ, ಇಂದಿನಿಂದ ತಮಿಳುನಾಡಿನಿಂದ ಬರುವವರಿಗೂ ನೆಗೆಟಿವ್ ರಿಪೋರ್ಟ್ ತರುವುದನ್ನು ಕಡ್ಡಾಯ ಮಾಡಿದ್ದು, ಚೆಕ್ ಪೋಸ್ಟ್ಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲು ಸಿಎಂ ಬೊಮ್ಮಾಯಿ ಅವರು ಏಕಪಕ್ಷೀಯವಾಗಿ ನಿರ್ಧರಿಸಲು ಆಗುವುದಿಲ್ಲ. ತಜ್ಞರ ಸಮಿತಿ, ಸಂಪುಟದೊಂದಿಗೆ ಚರ್ಚಿಸಬೇಕಾಗುತ್ತದೆ. ಫೆಬ್ರವರಿ ಮೊದಲನೇ ವಾರದಲ್ಲಿ ಕೊರೊನಾ ಪ್ರಕರಣ ಉತ್ತುಂಗಕ್ಕೆ ಹೋಗಲಿದೆ ಎಂಬ ಅಭಿಪ್ರಾಯವಿದೆ. ಜನರಿಗೆ ಅನೂಕೂಲವೂ ಆಗಬೇಕು, ಆರೋಗ್ಯವನ್ನೂ ಕಾಪಾಡುವ ನಿರ್ಧಾರವನ್ನು ತಜ್ಞರೊಟ್ಟಿಗೆ ಚರ್ಚಿಸಿ ಸಿಎಂ ತಿಳಿಸಲಿದ್ದಾರೆ ಎಂದು ಹೇಳಿದರು.