ಚಾಮರಾಜನಗರ: ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಚಾರಣಾಧೀನ ಕೈದಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ತಮಿಳುನಾಡಿನ ಆಸನೂರು ಸಮೀಪ ನಡೆದಿದೆ. ಚಾಮರಾಜನಗರದ 25 ವರ್ಷದ ಯುವಕ ಪರಾರಿಯಾಗಿರುವ ಆರೋಪಿ. ದೇವಾಲಯ ಹುಂಡಿ ಕಳವು, ದರೋಡೆ ಸೇರಿದಂತೆ ಚಾಮರಾಜನಗರ ಗ್ರಾಮಾಂತರ ಠಾಣೆ, ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಅದೇ ರೀತಿ, ತಮಿಳುನಾಡಿನ ಈರೋಡ್ ಜಿಲ್ಲಾ ವ್ಯಾಪ್ತಿಯಲ್ಲೂ ಈತನ ವಿರುದ್ಧ ಕಳವು ಪ್ರಕರಣಗಳು ದಾಖಲಾಗಿತ್ತು.
ಕೆಲ ದಿನಗಳ ಹಿಂದೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ತಮಿಳುನಾಡು ಸತ್ಯಮಂಗಲಂನ ನ್ಯಾಯಾಲಯಕ್ಕೆ ಇಂದು ವಿಚಾರಣೆಗೆ ಕರೆದೊಯ್ಯುವಾಗ ಆಸನೂರಿನ ಹೋಟೆಲ್ ಬಳಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಚಾಮರಾಜನಗರ ಪೊಲೀಸರು, ಆಸನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಹುಡುಕಾಟಕ್ಕೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹು ಮಾತನಾಡಿ, "ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಕಳವು ಪ್ರಕರಣ ಸಂಬಂಧ ಈತನ ವಿರುದ್ಧ ಕೇಸ್ ದಾಖಲಾಗಿತ್ತು. ಆರೋಪಿ ಚಾಮರಾಜನಗರದಲ್ಲಿ ಬಂಧನದಲ್ಲಿದ್ದ. ಈರೋಡ್ನಲ್ಲಿಯೂ ಈತನ ಮೇಲೆ ಕಳವು ಪ್ರಕರಣ ದಾಖಲಾಗಿತ್ತು. ಹೀಗಾಗಿ ತಮಿಳುನಾಡು ಸತ್ಯಮಂಗಲಂ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡು ಹೋಗುವಾಗ ವಿಚಾರಣಾಧೀನ ಕೈದಿ ಪರಾರಿಯಾಗಿದ್ದಾನೆ" ಎಂದು ತಿಳಿಸಿದರು.