ಚಾಮರಾಜನಗರ: ಚಿನ್ನದ ವ್ಯಾಪಾರಿಯನ್ನು ಸಿನಿಮಿಯ ರೀತಿಯಲ್ಲಿ ಕಾರು ಸಮೇತ ಅಪಹರಿಸಿರುವ ಘಟನೆ ಇಂದು ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ನಡೆದಿದೆ. ಶಿವು ಅಪಹರಣಕ್ಕೊಳಗಾದವರು. ಮೈಸೂರು ಕಡೆಯಿಂದ ಕೇರಳಕ್ಕೆ ತೆರಳುವಾಗ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ವ್ಯಾಪಾರಿಯ ಕಾರು ಅಡ್ಡಗಟ್ಟಿ ಚಾಲಕನನ್ನು ಹೊರಗೆಳೆದು ವ್ಯಾಪಾರಿಯನ್ನು ಅಪಹರಿಸಿದ್ದಾರೆ.
ದುಷ್ಕರ್ಮಿಗಳು ಹೆಲ್ಮೆಟ್ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ. ಪೊಲೀಸರ ದಿಕ್ಕು ತಪ್ಪಿಸಲು ಮೂರು ಕಾರುಗಳನ್ನು ಒಂದೊಂದು ದಿಕ್ಕಿಗೆ ಚಾಲನೆ ಮಾಡಿಕೊಂಡು ಹೋಗಿದ್ದು, ಒಂದು ಕಾರನ್ನು ಸೋಮಹಳ್ಳಿ ಬಳಿ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ, ಕೇರಳ ಮೂಲದ ಐವರನ್ನು ಪೊಲೀಸರು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದ್ದು ವ್ಯಾಪಾರಿ ಹಾಗೂ ಉಳಿದ ಅಪಹರಣಕಾರರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಚಾಮರಾಜನಗರ, ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ರಸ್ತೆಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿ ಕಾರುಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ, ಎಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಬೆಂಗಳೂರು: ರಾತ್ರಿ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಬೆಳಗ್ಗೆ ಮನೆ ಮುಂದೆ ಪತ್ತೆ
ಪರಿಚಯಸ್ಥರಿಂದ ಟೀ ಮಾರುವ ವ್ಯಕ್ತಿ ಕಿಡ್ನಾಪ್:ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ರೂ. ಗೆದ್ದು ನಗರಕ್ಕೆ ಬಂದಿದ್ದ ರಸ್ತೆ ಬದಿ ಟೀ ಮಾರುವ ವ್ಯಕ್ತಿಯನ್ನು ಪರಿಚಯಸ್ಥರೇ ಅಪಹರಿಸಿ ಹಲ್ಲೆಗೈದು, 15 ಲಕ್ಷ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಜೀವ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶ್ರೀನಗರದ ನಿವಾಸಿಯಾಗಿರುವ 32 ವರ್ಷದ ತಿಲಕ್ ಮಣಿಕಂಠ ಅಪಹರಣಕ್ಕೊಳಗಾಗಿದ್ದ ವ್ಯಕ್ತಿ. ಈತ ನೀಡಿದ ದೂರಿನ ಮೇರೆಗೆ ಐವರು ಅಪಹರಣಕಾರರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ನಗರದಲ್ಲಿ ಟೀ ಮಾರಾಟ ಮಾಡುತ್ತಿದ್ದ ತಿಲಕ್ ಗೋವಾಕ್ಕೆ ತೆರಳಿ ಕ್ಯಾಸಿನೋ ಆಡಬೇಕು ಎಂಬ ಆಸೆ ಹೊಂದಿದ್ದ. ಕ್ಯಾಸಿನೋ ಜೂಜಿನ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದ. ಅದರಂತೆ 4 ಲಕ್ಷ ರೂ. ಹಣ ಹೊಂದಿಸಿಕೊಂಡು ಸ್ನೇಹಿತರೊಂದಿಗೆ ಕಳೆದ ಜುಲೈ 30ರಂದು ಬೆಂಗಳೂರಿನಿಂದ ಪಣಜಿಗೆ ವಿಮಾನದ ಮೂಲಕ ಹೋಗಿದ್ದರು. ಮೂರು-ನಾಲ್ಕು ದಿನಗಳ ಕಾಲ ಅಲ್ಲೇ ಉಳಿದು ಕ್ಯಾಸಿನೋ ಜೂಜು ಆಡಿ 25 ಲಕ್ಷ ರೂ. ಗೆದ್ದಿದ್ದ. ಬಳಿಕ ಆಗಸ್ಟ್ 4ರಂದು ಗೋವಾದಿಂದ ಬೆಂಗಳೂರಿಗೆ ಬಂದಿದ್ದ. ಜೂಜಿನಲ್ಲಿ 25 ಲಕ್ಷ ಗೆದ್ದ ವಿಚಾರ ಮನೆಯವರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡು ಸಂಭ್ರಮಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ತಂದೆಯ ಪಿಂಚಣಿಗಾಗಿ 'ಪತ್ನಿ'ಯಾದ ಮಗಳು.. ಬರೋಬ್ಬರಿ 10 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ: ಆರೋಪಿ ಬಂಧನ