ಚಾಮರಾಜನಗರ: 41 ವರ್ಷದ ವಿವಾಹಿತ ಮಹಿಳೆ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದ ಚಾಮರಾಜನಗರ ಪೂರ್ವ ಠಾಣೆಯ ಕಾನ್ಸ್‌ಸ್ಟೇಬಲ್ ಒಬ್ಬರ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ.
ಏನಿದು ಪ್ರೇಮ್ ಕಹಾನಿ!:ಚಾಮರಾಜನಗರ ತಾಲೂಕಿನ ಗ್ರಾಮವೊಂದರ 41 ವರ್ಷದ ಮಹಿಳೆ ಹಾಗೂ ಪೊಲೀಸ್ ಕಾನ್ಸ್‌ಸ್ಟೇಬಲ್ ಕಳೆದ 2020 ರಿಂದ ಪರಿಚಿತರಾಗಿದ್ದು, ಪರಿಚಯ ಸಲುಗೆ ಪಡೆದುಕೊಂಡು ವಿವಾಹೇತರ ಸಂಬಂಧದ ತನಕ ಬಂದು ಮುಟ್ಟಿದೆ. ಇವರ ಕಹಾನಿ ಮತ್ತಷ್ಟು ಗಟ್ಟಿಯಾದ್ದರಿಂದ ಕಳೆದ ಕೆಲವು ತಿಂಗಳುಗಳಿಂದ ಚಾಮರಾಜನಗರದಲ್ಲೇ ಮನೆ ಮಾಡಿ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದರಂತೆ. ಇದೀಗ ತಾನು ಅವರ ಜೊತೆಗೇ ಜೀವನ ಸಾಗಿಸಬೇಕೆಂದು ವಿವಾಹಿತೆ ಪಟ್ಟು ಹಿಡಿದಿದ್ದಾರೆ.
ತಾಳಿ ಭಾಗ್ಯ ಕರುಣಿಸಿ ಕೈ ಕೊಟ್ಟ ಪೊಲೀಸಪ್ಪ: ''ಪೊಲೀಸ್ ವಸತಿ ನಿಲಯದಲ್ಲೇ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದ ವೇಳೆ ದೇವರ ಫೋಟೋ ಮುಂದೆ ಅರಿಶಿನ ಕೊಂಬು ಕಟ್ಟಿದ್ದರು. ಮದುವೆ ಆಗಿ ಎರಡು ವರ್ಷಗಳ ಹತ್ರ ಆಗ್ತಿದೆ. ಒಂದೂವರೆ ವರ್ಷ ಕ್ವಾಟ್ರಸ್ನಲ್ಲಿದ್ದೆವು. ಕಳೆದ ಆರು ತಿಂಗಳುಗಳಿಂದ ಬಾಡಿಗೆ ಮನೆಯಲಿದ್ದೆವು. ಯಾವತ್ತೂ ನನ್ನನ್ನು ಬಿಟ್ಟು ಹೋಗಿದ್ದಿಲ್ಲ. ಆದರೆ ಇದೇ ಜೂನ್ 1ಕ್ಕೆ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಹೋದವರು ಮತ್ತೆ ವಾಪಸ್ ಬಂದಿಲ್ಲ. ಫೋನ್ ಮಾಡಿದರೆ, ನಾನು ಬರುವ ಪರಿಸ್ಥಿತಿಯಲ್ಲಿಲ್ಲ. ಮನೆಯವರು ನನಗೆ ಬೇರೆ ಮದುವೆ ಮಾಡಿಸುತ್ತಿದ್ದಾರೆ. ನೀನು ನಿನ್ನ ಜೀವನ ನೋಡಿಕೋ, ನಿನ್ನ ಮನೆಯವರ ಕಡೆ ಸೇರಿಕೋ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ತಾಯಿ, ಮನೆಯವರು ಎಲ್ಲರೂ ನನ್ನನ್ನು ಬಿಟ್ಟು ಹಾಕಿದ್ದಾರೆ. ಅಂತರ್ಜಾತೀಯ ಮದುವೆಯಾಗಿದ್ದೇನೆ ಎಂದು ಮನೆಯವರೆಲ್ಲ ನನ್ನನ್ನು ಬಿಟ್ಟು ಹಾಕಿದ್ದಾರೆ'' ಎಂದು ಅಳಲು ತೋಡಿಕೊಂಡಿದ್ದಾರೆ.