ಚಾಮರಾಜನಗರ: ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಉಲ್ಬಣವಾಗುತ್ತಿರುವುದು ಒಂದೆಡೆಯಾದರೆ, ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ದಾಂಗುಡಿ ಇಡುತ್ತಿರುವುದರಿಂದ ಬರುವವರಿಗೆ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ಕುರಿತು ಡಿಎಚ್ಒ ಡಾ.ರವಿ ಈಟಿವಿ ಭಾರತದೊಂದಿಗೆ ಮಾತನಾಡಿ, ಜಿಲ್ಲೆಯ ಪ್ರವಾಸಿತಾಣಗಳೇ ಕೊರೊನಾ ಹಾಟ್ಸ್ಪಾಟ್ ಆಗುವುದನ್ನು ತಪ್ಪಿಸಲು ಯಾತ್ರಾ ಸ್ಥಳ, ಪ್ರೇಕ್ಷಣೀಯ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ರ್ಯಾಪಿಡ್ ಆ್ಯಂಟಿಜೆನ್ ಮತ್ತು ಆರ್ಟಿಪಿಸಿಆರ್ ಪರೀಕ್ಷೆ ಮಾಡಲು ಯೋಜಿಸಲಾಗಿದ್ದು ಇದಕ್ಕಾಗಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ವಾರಾಂತ್ಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುವ ಭರಚಕ್ಕಿ, ದರ್ಗಾ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಗನ ಬೆಟ್ಟ ಇನ್ನಿತರ ಕಡೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಗುವುದು. ಪ್ರವಾಸಿಗರ ಮೊಬೈಲ್ ಸಂಖ್ಯೆ ಸಮೇತ ಅವರ ವಿವರ ಬರೆದುಕೊಳ್ಳುವುದರಿಂದ ಒಂದು ವೇಳೆ ಕೋವಿಡ್ ಪಾಸಿಟಿವ್ ಬಂದರೆ ಸಂಬಂಧಿಸಿದ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗುವುದು ಎಂದರು.
ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಜನರು ಉಪೇಕ್ಷಿಸುವುದರಿಂದ ಪೊಲೀಸ್ ಇಲಾಖೆಯ ಸಹಕಾರವನ್ನು ಪಡೆಯುತ್ತೇವೆ ಎಂದು ಡಿಎಚ್ಒ ಹೇಳಿದ್ದಾರೆ.
ಕೆಲವೊಂದು ಕಡೆ ಹೋಂ ಐಸೋಲೇಷನ್ನಲ್ಲಿರಬೇಕಾದವರು, ರೋಗ ಲಕ್ಷಣಗಳು ಹೊಂದಿರುವವರು ಕೂಡ ಸಾಮಾಜಿಕ ಅಂತರ ಪಾಲಿಸದೇ, ಮಾಸ್ಕ್ ಧರಿಸದೇ ಅಡ್ಡಾಡುವುದು ಗಮನಕ್ಕೆ ಬಂದಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.