ಚಾಮರಾಜನಗರ: ಸತತ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ನಗರದ ಜಿಲ್ಲಾ ನ್ಯಾಯಾಲಯ ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘ ಪ್ರತಿಭಟನೆ ನಡೆಸಿತು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿ ಎದುರು ಮಾನವ ಸರಪಳಿ ರಚಿಸಿದ ವಕೀಲರು ರಸ್ತೆತಡೆ ನಡೆಸಿ ಶಾಸಕ ಪುಟ್ಟರಂಗಶೆಟ್ಟಿ, ಜಿಲ್ಲಾಡಳಿತ, ನಗರಸಭೆ ಹಾಗೂ ಗುತ್ತಿಗೆದಾರರ ವಿರುದ್ದ ಧಿಕ್ಕಾರ ಕೂಗಿದರು.
ಜಿಲ್ಲಾ ನ್ಯಾಯಾಲಯ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸತತ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಮಾಡಲಾಗುತ್ತಿದೆ. ಇದರಿಂದ ಜನ ಸಾಮಾನ್ಯರಿಗೆ ಹಾಗೂ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯುಂಟಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರಾಗಲಿ, ನಗರಸಭೆಯಾಗಲಿ ಅಥವಾ ಜಿಲ್ಲಾಧಿಕಾರಿಯಾಗಲಿ ಕಾಳಜಿ ವಹಿಸಿಲ್ಲ ಎಂದು ಕಿಡಿಕಾರಿದರು.
ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ, ಕೂಡಲೇ ಅಪೂರ್ಣಗೊಂಡಿರುವ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಸ್ತೆತಡೆ ಮಾಡಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿ, ವಾಹನ ಸವಾರರು ಕೆಲಕಾಲ ಬಿಸಿಲಿನಲ್ಲಿ ನಿಲ್ಲಬೇಕಾಯಿತು. ಅಲ್ಲದೇ ಕೆಲ ವಾಹನ ಚಾಲಕರು ನಮಗೆ ತೊಂದರೆಯಾಗುತ್ತಿದೆ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಪ್ರತಿಭಟನಾನಿರತರನ್ನು ಕೇಳಿಕೊಂಡಾಗ ಈ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆಯಿತು.