ಕರ್ನಾಟಕ

karnataka

ETV Bharat / state

ಪೂರ್ವ ಮುಂಗಾರು ಬಿತ್ತನೆಗೆ ಗಡಿಜಿಲ್ಲೆ ತಯಾರಿ: ಹತ್ತಿ ಬೀಜ ಸಿಗದೆ ರೈತರ ಪರದಾಟ - Pre monsoon agricultural activity

ಚಾಮರಾಜನಗರ ಜಿಲ್ಲೆಯ ರೈತರು ಭೂಮಿ ಹದಗೊಳಿಸಿ ಬಿತ್ತನೆ ಮಾಡಲು ತಯಾರಾಗುತ್ತಿದ್ದಾರೆ. ಆದರೆ, ರೈತರಿಗೆ ಹತ್ತಿ ಬೀಜದ ಕೊರತೆ ಉಂಟಾಗಿದೆ.

farmers
ಬೀಜ ಮಾರಾಟ ಅಂಗಡಿ ಮುಂದೆ ಪರದಾತ್ತಿರುವ ರೈತರು

By

Published : Apr 3, 2023, 10:29 AM IST

Updated : Apr 3, 2023, 3:09 PM IST

ಹತ್ತಿ ಬೀಜ ಸಿಗದೆ ಅಂಗಡಿ ಮುಂದೆ ಪರದಾಡುತ್ತಿರುವ ರೈತರು

ಚಾಮರಾಜನಗರ:ಪೂರ್ವ ಮುಂಗಾರು ಕೃಷಿಗೆ ಜಿಲ್ಲೆಯ ರೈತರು ಅಣಿಯಾಗುತ್ತಿದ್ದು, ಈಗಾಗಲೇ ಭೂಮಿ ಹದ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ. ಈ ಹೊತ್ತಿನಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯಲ್ಲಿ ಬಿತ್ತನೆ ಬೀಜ ಸಿಗದೇ ರೈತರು ಪರದಾಡುತ್ತಿದ್ದಾರೆ.

ಎರಡು ವಾರಗಳಿಂದ ಜಿಲ್ಲೆಯಲ್ಲಿ ಸುಡು ಬಿಸಿಲು ಹೆಚ್ಚಾಗಿದ್ದರೂ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಅಲ್ಲಲ್ಲಿ ಚದುರಿದ ಮಳೆಯೂ ಆಗಿದೆ. ಹಾಗಾಗಿ, ರೈತರು ಮುಂಗಾರು ಪೂರ್ವ ಮಳೆಯ ನಿರೀಕ್ಷೆಯಲ್ಲಿ ಭೂಮಿ ಹಸನು ಮಾಡಿ ಬಿತ್ತನೆ ಮಾಡಲು ರೆಡಿಯಾಗುತ್ತಿದ್ದು, ಈಗ ಹತ್ತಿ ಬೀಜ ಕೊರತೆ ಉಂಟಾಗಿದೆ.

ಕೇವಲ ಎರಡೇ ತಾಸಿಗೆ ಬೇಗೂರಿನ ಬೀಜ ಮಾರಾಟ ಮಳಿಗೆ ಬಾಗಿಲು ಮುಚ್ಚಿದ್ದು, ನೂರಾರು ಮಂದಿ ರೈತರು ಹತ್ತಿ ಬೀಜ ಸಿಗದೇ ಆಕ್ರೋಶ ಹೊರ ಹಾಕಿದರು. ಬೀಜ ಕೊರತೆ ಎದುರಾದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ತನಗೆ ಬೇಕಾದವರಿಗೆ ಬೀಜ ಮಾರಾಟ ಮಾಡಿ ಬಾಗಿಲು ಮುಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇನ್ನು ನೂರಾರು ಮಂದಿ ರೈತರು ಬೀಜ ಸಿಗದೇ ಸ್ಥಳದಲ್ಲೇ ಬೀಡು ಬಿಟ್ಟಿರುವುದರಿಂದ ಪೊಲೀಸರು ದೌಡಾಯಿಸಿ ಸಮಾಧಾನಪಡಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ಬಂದರೆ ಬೀಜ ಇಲ್ಲ, ಬೆಳೆ ಬಂದರೆ ಬೆಲೆ ಇಲ್ಲ ಎಂಬ ಸ್ಥಿತಿ ರೈತರದ್ದಾಗಿದೆ.

ಮಳೆಗೆ ಕಾಯುತ್ತಿರುವ ರೈತರು:ಕೊಳವೆ ಬಾವಿ, ನೀರಾವರಿ ವ್ಯವಸ್ಥೆ ಇರುವ ರೈತರಿಗೆ ಸಮಸ್ಯೆ ಇಲ್ಲ. ಆದರೆ, ಮಳೆ ನೀರನ್ನೇ ಅವಲಂಬಿಸಿ ಕೃಷಿ ಮಾಡುವವರಿಗೆ ವರುಣನ ಕೃಪೆ ಇರಲೇ ಬೇಕು. ಕೃಷಿ ಇಲಾಖೆ ಕೂಡ ಮುಂಗಾರು ಪೂರ್ವ ಕೃಷಿ ಚಟುವಟಿಕೆಗೆ ಪೂರಕವಾದ ಸಿದ್ಧತೆ ಆರಂಭಿಸಿದೆ. ಈ ಬಾರಿ ಜೂನ್‌ಗಿಂತಲೂ ಮೊದಲು ಜಿಲ್ಲಾದ್ಯಂತ 54,440 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಏಪ್ರಿಲ್‌ ಮೊದಲ ವಾರ ಇಲ್ಲವೇ 2ನೇ ವಾರದಿಂದ ಮುಂಗಾರು ಪೂರ್ವ ಕೃಷಿ ಚಟುವಟಿಕೆ ಆರಂಭವಾಗುತ್ತದೆ. ಗುಂಡ್ಲುಪೇಟೆ ಭಾಗದಲ್ಲಿ ಮೊದಲು ಆರಂಭಗೊಂಡು, ನಂತರ ಇತರ ಕಡೆಗಳಲ್ಲೂ ಶುರುವಾಗುತ್ತದೆ. ಆರಂಭದಲ್ಲಿ ಸೂರ್ಯಕಾಂತಿ, ಹತ್ತಿ ಬಿತ್ತನೆ ಆರಂಭಿಸುತ್ತಾರೆ. ನಂತರ ಉಳಿದ ಬೆಳೆಗಳನ್ನು ಬಿತ್ತನೆ ಮಾಡುತ್ತಾರೆ.

ಐದು ತಾಲೂಕುಗಳ ಪೈಕಿ ಮುಂಗಾರು ಪೂರ್ವದಲ್ಲಿ ಗುಂಡ್ಲುಪೇಟೆಯಲ್ಲಿ ಹೆಚ್ಚು ವಿಸ್ತೀರ್ಣದಲ್ಲಿ ಬಿತ್ತನೆ ನಡೆಯುತ್ತದೆ. ಈ ಬಾರಿ 31 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿಯನ್ನು ಇಲಾಖೆ ಹೊಂದಿದೆ. ರೈತರು ಸೂರ್ಯಕಾಂತಿಯನ್ನು ಹೆಚ್ಚು ಬೆಳೆಯುತ್ತಿದ್ದು, ಕಳೆದ ಬಾರಿ 16,600 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿತ್ತು. ಸದ್ಯ, ಬೀಜ ವಿತರಣೆಯಲ್ಲಿ ಆಗಿರುವ ಗೊಂದಲವನ್ನು ನಿವಾರಿಸುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಉಷ್ಣ ಮಾರುತದ ಆತಂಕ : ಹವಾಮಾನ ಇಲಾಖೆಯಿಂದ ಮಾಹಿತಿ

Last Updated : Apr 3, 2023, 3:09 PM IST

ABOUT THE AUTHOR

...view details