ಚಾಮರಾಜನಗರ :6 ಮಂದಿ ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಓರ್ವ ಇಂಟರ್ನಿಗೆ ಕೊರೊನಾ ಸೋಂಕು ತಗುಲಿದೆ. ಇಲ್ಲಿನ ಕೋವಿಡ್ ಆಸ್ಪತ್ರೆಗೆ ಇಂದು ದಾಖಲಾಗಿದ್ದಾರೆ ಎಂದು ಡಿಹೆಚ್ಒ ಡಾ.ವಿಶ್ವೇಶ್ವರಯ್ಯ ಮಾಹಿತಿ ನೀಡಿದ್ದಾರೆ.
ಸಿಮ್ಸ್ ಹಾಸ್ಟೆಲ್ನಲ್ಲಿದ್ದ 325 ಮಂದಿ ವಿದ್ಯಾರ್ಥಿಗಳಿಗೆ ಶನಿವಾರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಇಂದು ವರದಿ ಬಂದಿದೆ. ಆರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.
ಇವತ್ತು ಕೂಡ 150 ಜನರಿಗೆ ಪರೀಕ್ಷೆ ನಡೆಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಾಸ್ಟೆಲ್ ಅನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಈಟಿವಿ ಭಾರತಕ್ಕೆ ತಿಳಿಸಿದರು. ಕೊರೊನಾ ಪತ್ತೆಯಾದವರಲ್ಲಿ ಕೇರಳ ಮೂಲದವರು ಯಾರೂ ಇಲ್ಲ. ಜೊತೆಗೆ ಎಲ್ಲರೂ ರೋಗ ಲಕ್ಷಣ ರಹಿತವಾಗಿದ್ದಾರೆ.
ಇಂಟರ್ನಿಯ ಪ್ರಾಥಮಿಕ ಸಂಪರ್ಕಿತರಿಗೂ ಕೋವಿಡ್ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಇಂದು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 8 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.