ಕೊಳ್ಳೇಗಾಲ: ಪಟ್ಟಣದಲ್ಲಿ ಕೊರೊನಾ ಸೋಂಕಿತರು ಸರಣಿ ಸಾವನ್ನಪ್ಪುತ್ತಿರುವ ಹಿನ್ನೆಲೆ ಚಾಮರಾಜನಗರ ಸೇರಿದಂತೆ ಕೊಳ್ಳೇಗಾಲವನ್ನು ಒಂದು ವಾರ ಕಾಲ ಲಾಕ್ಡೌನ್ ಮಾಡಿ ಎಂದು ಜನರು ಒತ್ತಾಯಿಸಿದ್ದಾರೆ.
ಚಾಮರಾಜನಗರ ಕಳೆದ ಒಂದು ತಿಂಗಳ ಹಿಂದೆ ಈಡೀ ದಕ್ಷಿಣ ಭಾರತದಲ್ಲೇ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇದೀಗ ತಮಿಳುನಾಡು, ಬೆಂಗಳೂರು, ಮೈಸೂರಿನಿಂದ ಬಂದವರಿಂದ ಕೊರೊನಾ ಜಿಲ್ಲೆಗೆ ವಕ್ಕರಿಸಿ ಜನರಲ್ಲಿ ಭಯ ಮೂಡಿಸಿದೆ. ಜಿಲ್ಲೆಯಲ್ಲಿನ ಚಾಮರಾಜನಗರ, ಹನೂರು, ಗುಂಡ್ಲುಪೇಟೆ ಸೇರಿದಂತೆ ಕೊಳ್ಳೇಗಾಲದಲ್ಲೂ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಮುದಾಯ ಮಟ್ಟಕ್ಕೂ ತಲುಪುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಲಾಕ್ಡೌನ್ ಮಾಡಲು ಒತ್ತಾಯಿಸಿದ ಜನರು ಕೊಳ್ಳೇಗಾಲ ಸುತ್ತಮುತ್ತಲ ಬಡವಾಣೆಗಳು ಹಾಗೂ ಹಲವು ಗ್ರಾಮಗಳು ಕಂಟೈನ್ಮೆಂಟ್ ಝೋನ್ಗಳಾಗಿವೆ. ಈಗಾಗಲೇ ಕೊಳ್ಳೇಗಾಲ ತಾಲೂಕಿನಲ್ಲಿ 32 ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಒಂದು ವಾರ ಕಾಲ ಲಾಕ್ಡೌನ್ ಮಾಡಬೇಕು ಎಂಬುದು ಬಹುತೇಕರ ಒತ್ತಾಯವಾಗಿದೆ.
ರೈತ ಮುಖಂಡ ಬಸವರಾಜು ಮಾತನಾಡಿ, ಕೊರೊನಾ ತಡೆಗೆ ಜಿಲ್ಲಾಡಳಿತ ಮಾಡಿದ ಪ್ರಯತ್ನ ಹೊಳೆಯಲ್ಲಿ ಹುಣಸೆ ತೀಡಿದ ರೀತಿ ಆಯಿತು. ಬೇರೆ ಕಡೆಗಳಿಂದ ಬಂದವರಿಂದ ಕೊರೊನಾ ಬಂತು. ಹಸಿರು ಜಿಲ್ಲೆಯಾಗಿದ್ದ ಚಾಮರಾಜನಗರ ಕೊರೊನಾ ಪೀಡಿತ ಜಿಲ್ಲೆಯಾಯಿತು ಎಂದರು. ಈ ನಡುವೆ ಸಾವಿನ ಸಂಖ್ಯೆಯೂ ಏರುತ್ತಿದೆ. ಜಿಲ್ಲಾಡಳಿತ ಸೂಕ್ಷ್ಮವಾಗಿ ಈ ವಿಚಾರ ಪರಿಗಣಿಸಿ ಕೊಳ್ಳೇಗಾಲವನ್ನು ವಾರ ಕಾಲ ಲಾಕ್ಡೌನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.