ಚಾಮರಾಜನಗರ:ಕೊರೊನಾ ಭೀತಿಯಿಂದ ರಕ್ತದಾನಿಗಳು ಆಸ್ಪತ್ರೆಗೆ ಮುಖ ಮಾಡದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ಭೀತಿ ಎದುರಾಗಿದೆ.
ಸದಾ ಕಾಲ ಜನಜಂಗುಳಿಯಿಂದ ಕೂಡಿರುತ್ತಿದ್ದ ಖಾಸಗಿ ಕ್ಲಿನಿಕ್, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ಬಿಕೋ ಎನ್ನುತ್ತಿವೆ. ಆದರೆ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಅಗತ್ಯ ರಕ್ತದ ಪೂರೈಕೆ ಇಲ್ಲದೆ ಪರದಾಡುವಂತಾಗಿದೆ. ರಕ್ತ ನಿಧಿ ಕೇಂದ್ರದಲ್ಲಿ ಅಗತ್ಯ ರಕ್ತ ಸಂಗ್ರಹವಿಲ್ಲದೆ ದಾನಿಗಳಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.
ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರರೋಗಿಗಳ ವಿಭಾಗ ಸ್ಥಗಿತಗೊಂಡಿದ್ದು, ತುರ್ತು ಚಿಕಿತ್ಸೆ ಮತ್ತು ಹೆರಿಗೆ ಪ್ರಕರಣಗಳಿಗೆ ಮಾತ್ರ ರಕ್ತದ ಅವಶ್ಯಕತೆ ಇದೆ. ಅವಶ್ಯವಿರುವ ರಕ್ತಕ್ಕಾಗಿ ರೋಗಿಯ ಸಂಬಂಧಿಕರನ್ನು, ಪರಿಚಯವಿರುವ ರಕ್ತದಾನಿಗಳನ್ನು ವೈದ್ಯರು ಮನವೊಲಿಸಿ ರಕ್ತ ಪಡೆಯುತ್ತಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಪ್ರತಿನಿತ್ಯ 8-10 ಯುನಿಟ್ ರಕ್ತದ ಬೇಡಿಕೆ ಇದ್ದು, ಅದು ರಕ್ತ ನಿಧಿ ಕೇಂದ್ರದಲ್ಲಿ ದೊರಕುತ್ತಿಲ್ಲ. ಪ್ರಸ್ತುತ ನಾಲ್ಕರಿಂದ ಐದು ಯುನಿಟ್ಗಳಷ್ಟು ರಕ್ತ ಪೂರೈಕೆಯಾಗುತ್ತಿದೆ. ಉಳಿದ ರಕ್ತಕ್ಕಾಗಿ ರೋಗಿಗಳ ಸಂಬಂಧಿಕರನ್ನೇ ಆಶ್ರಯಿಸಬೇಕಿದೆ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಇದೆ. ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಭಾರತ ಲಾಕ್ಡೌನ್ ಆಗಿರುವುದರಿಂದ ರಕ್ತದಾನಿಗಳು ಆಸ್ಪತ್ರೆಗೆ ಬಂದು ರಕ್ತ ನೀಡಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ರಕ್ತದ ಕೊರತೆ ಎದುರಾಗಿದೆ. ಆದರೆ ಸ್ವಯಂ ರಕ್ತದಾನಿಗಳಲ್ಲಿ ಮನವಿ ಮಾಡುತ್ತೇನೆ. ರಕ್ತ ನೀಡುವುದರಿಂದ ಅಮೂಲ್ಯ ಜೀವ ಉಳಿಸಿದಂತಾಗುತ್ತದೆ. ಹಾಗಾಗಿ ಮುನ್ನೆಚರಿಕೆ ಕ್ರಮಗಳನ್ನ ತೆಗೆದುಕೊಂಡು ರಕ್ತ ದಾನ ಮಾಡಿ ಎಂದು ಮನವಿ ಮಾಡುತ್ತಾರೆ ರಕ್ತದಾನಿಯಾದ ಅಜಿತ್. ನಾನು ರಸ್ತೆಯಲ್ಲಿ ಹೋಗುವಾಗ ಯಾರೋ ಒಬ್ಬರು ಬಂದು ನಾನು ನನ್ನ ಹೆಂಡತಿಯನ್ನ ಹೆರಿಗೆಗೆ ಸೇರಿಸಿದ್ದೇನೆ. ಅವರಿಗೆ ರಕ್ತ ಬೇಕಿದೆ, ರಕ್ತದಾನ ಮಾಡುತ್ತೀರಾ ಎಂದು ಕೇಳಿದರು.
ಅದಕ್ಕಾಗಿ ನಾನು ಕೊರೊನಾ ಭೀತಿಯಿಂದ ರಕ್ತದಾನಿಗಳು ಹೊರಗೆ ಬರುತ್ತಿಲ್ಲವಾದ್ದರಿಂದ ರಕ್ತ ನೀಡುತ್ತಿದ್ದೇನೆ. ಇದರಿಂದ ಒಂದಲ್ಲ ಎರಡು ಜೀವಗಳು ಉಳಿಯುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಮತ್ತೋರ್ವ ಯುವಕ ಕೌಶಿಕ್ ರಾಂ ಮನವಿ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ಎದುರಾಗಿದ್ದು, ರಕ್ತ ನಿಧಿಯಲ್ಲಿ ಬೇಡಿಕೆಗೆ ಅನುಗುಣವಾಗಿ ರಕ್ತ ಸಿಗುತ್ತಿಲ್ಲ. ಅಮೂಲ್ಯ ಜೀವ ಉಳಿಸಲು ರಕ್ತದಾನದ ಅವಶ್ಯಕತೆ ಇದ್ದು, ಸ್ವಯಂ ರಕ್ತದಾನಿಗಳು ಮುಂದೆ ಬರಬೇಕಿದೆ. ಜಿಲ್ಲಾಸ್ಪತ್ರೆಯ ರಕ್ತದ ಬೇಡಿಕೆ ಈಡೇರಿಸಬೇಕಿದೆ.