ಚಾಮರಾಜನಗರ:ಎರಡನೇ ಕೋವಿಡ್-19 ಪ್ರಕರಣ ಕಾಣಿಸಿಕೊಂಡ ಗುಂಡ್ಲುಪೇಟೆಯ ಮಹಾದೇವಪ್ರಸಾದ್ ನಗರ ಕೊರೊನಾ ಹಾಟ್ ಸ್ಪಾಟ್ ಆಗುವ ಸಾಧ್ಯತೆ ಹೆಚ್ಚಿದೆ.
ಸೋಂಕಿತನ ಸಂಪರ್ಕವಿಲ್ಲದೆ ಬಫರ್ ಝೋನ್ನಿಂದ ಆಚೆಗಿನ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕು ತಗುಲಿರುವುದು ಸಮುದಾಯಕ್ಕೆ ಹರಡುವ ಆತಂಕ ತಂದೊಡ್ಡಿದೆ. ಜಿಲ್ಲೆಯಲ್ಲಿ ಈವರೆಗೆ ವರದಿಯಾಗಿರುವ ಒಟ್ಟು 8 ಪ್ರಕರಣಗಳಲ್ಲಿ 5 ಪ್ರಕರಣ ಗುಂಡ್ಲುಪೇಟೆಯದ್ದಾಗಿವೆ. 39 ಪ್ರಾಥಮಿಕ ಸಂಪರ್ಕಿತರಲ್ಲಿ 15ಕ್ಕೂ ಹೆಚ್ಚು ಮಂದಿಗೆ ಕೋವಿಡ್ ತಗುಲುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1:10 ಅನುಪಾತವನ್ನಿಟ್ಟುಕೊಂಡರೆ ಗುಂಡ್ಲುಪೇಟೆ ಸೋಂಕಿತ ಚಾಲಕನೊಂದಿಗೆ 39 ಮಂದಿ ಪ್ರಾಥಮಿಕ ಸಂಪರ್ಕ, 170ಕ್ಕೂ ಹೆಚ್ಚು ಮಂದಿ ದ್ವಿತೀಯ ಸಂಪರ್ಕಿತರಿರುವುದು ಕಳವಳಕಾರಿಯಾಗಿದೆ. ಎರಡು ದಿನದ ಅಂತರದಲ್ಲಿ ಗುಂಡ್ಲುಪೇಟೆಯಲ್ಲಿ 4 ಪ್ರಕರಣ ಪತ್ತೆಯಾಗಿದ್ದು, ಇವರಲ್ಲಿ ಇಬ್ಬರು ಬೀಡಿ ಕಟ್ಟುವ ಮಹಿಳೆಯರು, ಓರ್ವ ಚಾಲಕ ಮತ್ತೋರ್ವ ಕೂಲಿ ಕೆಲಸಗಾರನಿದ್ದಾರೆ.
ಚಾಮರಾಜನಗರದ ಸರ್ವೇಯರ್ಗೆ ಜ್ವರವಿದ್ದರೂ ಎರಡು ದಿನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಜೊತೆಗೆ ಕ್ಷೇತ್ರ ಕಾರ್ಯವನ್ನು ಮಾಡಿದ್ದಾರೆ. ಚೆಕ್ಪೋಸ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್ಸ್ಟೆಬಲ್ಗೂ ಸೋಂಕು ತಗುಲಿದ್ದು, ಆತ ಗ್ರಾಮಕ್ಕೆ ತೆರಳಿರುವ ಬಗ್ಗೆ, ಠಾಣೆ ಭೇಟಿ, ಸಹೋದ್ಯೋಗಿಗಳ ಭೇಟಿ ಬಗ್ಗೆ ಮಾಹಿತಿ ಆರೋಗ್ಯ ಇಲಾಖೆ ಕಲೆ ಹಾಕಲಾಗುತ್ತಿದೆ. ಜಿಲ್ಲೆಯ 8 ಪ್ರಕರಣಗಳ ಪೈಕಿ ವೈದ್ಯಕೀಯ ವಿದ್ಯಾರ್ಥಿ ಗುಣಮುಖನಾಗಿ ಬಿಡುಗಡೆಯಾಗಿದ್ದಾನೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗೆ ನೋಟಿಸ್: ಜ್ವರ, ಕೆಮ್ಮು, ನೆಗಡಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಆಸ್ಪತ್ರೆಗೆ ಬಂದ ವೇಳೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಡಿಸಿ ಸೂಚನೆಯನ್ನು ಪಾಲನೆ ಮಾಡದ ಸಂತ ಜೋಸೆಫ್ ಆಸ್ಪತ್ರೆಗೆ ಡಿಹೆಚ್ಒ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಸೋಂಕಿಗೆ ತುತ್ತಾಗಿರುವ ಭೂಮಾಪಕಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದರೂ, ಜಿಲ್ಲಾಡಳಿತದ ಗಮನಕ್ಕೆ ತಾರದೇ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಗಂಟಲು ದ್ರವ ಸಂಗ್ರಹಿಸಿದ ಬಳಿಕ ಶಂಕಿತರನ್ನು ತಾಲೂಕು ಮಟ್ಟದಲ್ಲಿ ನಿಗಾ ಘಟಕದಲ್ಲಿರಿಸಲು ಜಿಲ್ಲಾಡಳಿತ ಮುಂದಾಗಿದೆ.