ಚಾಮರಾಜನಗರ:ಮನುಷ್ಯರ ಬಳಿಕ ವನ್ಯ ಜೀವಿಗಳಿಗೂ ಕೊರೊನಾ ಹರಡುವ ಭೀತಿ ಎದುರಾಗಿರುವುದರಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೊರೊನಾ ಕಟ್ಟೆಚ್ಚರ ವಹಿಸಲಾಗಿದ್ದು, ಕಳ್ಳಬೇಟೆ ತಡೆ ಶಿಬಿರದಲ್ಲಿರುವ ಸಿಬ್ಬಂದಿ ಅರಣ್ಯ ಬಿಟ್ಟು ಹೊರ ಬರದಂತೆ ಸೂಚಿಸಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 52ಕ್ಕೂ ಹೆಚ್ಚು ಕಳ್ಳ ಬೇಟೆ ತಡೆ ಶಿಬಿರಗಳಿದ್ದು, ಒಂದು ಕ್ಯಾಂಪ್‍ನಲ್ಲಿ 5 ಜನ ಇರಲಿದ್ದಾರೆ. ಕ್ಯಾಂಪ್‍ನಲ್ಲಿರುವ ಸಿಬ್ಬಂದಿ ಊರಿಗೆ ಹೋಗುವಂತಿಲ್ಲ. ರಜೆ ಮೇಲೆ ತೆರಳಿದ ಸಿಬ್ಬಂದಿಯೂ ಊರಿಂದ ಕ್ಯಾಂಪಿಗೆ ಬರುವಂತಿಲ್ಲ. ಹಳ್ಳಿಗಳಲ್ಲೂ ಕೊರೊನಾ ವ್ಯಾಪಿಸಿರುವುದರಿಂದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೊರೊನಾ ಕಟ್ಟೆಚ್ಚರ! ಕೊರೊನಾ ಇನ್ನು ನಿಯಂತ್ರಣಕ್ಕೆ ಬರದ ಹಿನ್ನೆಲೆ ಕಾಡು ಬಿಟ್ಟು ಹೊರ ಬರದಂತೆ ಕ್ಯಾಂಪಿನ ಸಿಬ್ಬಂದಿಗೆ ಸೂಚಿಸಲಾಗಿದ್ದು, ತೀರಾ ಅನಿವಾರ್ಯ ಸಂದರ್ಭದಲ್ಲಷ್ಟೇ ಅವರು ಹೊರ ಬರಬಹುದು. ಮನೆಗೆ ತೆರಳಬಹುದೆಂದು ಬಂಡೀಪುರ ಸಿಎಫ್ಒ ನಟೇಶ್ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ:ಸಿ ಟಿ ರವಿ-ಡಿವಿಎಸ್ ಮುಖವಾಡ.. ತಟ್ಟೆ ಹಿಡಿದು ಕಾಂಗ್ರೆಸ್ ಕಾರ್ಯಕರ್ತರಿಂದ ಭಿಕ್ಷಾಟನೆ
ಬಂಡೀಪುರದಲ್ಲಿ ಸಫಾರಿ ಹಾಗೂ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನಕ್ಕೆ ನಿರ್ಬಂಧ ಹೇರಲಾಗಿರುವ ಕಾರಣ ಅರಣ್ಯ ಪ್ರದೇಶಕ್ಕೆ ಜನ ಸಂಪರ್ಕ ತೀರಾ ಕಡಿಮೆ. ಕಳ್ಳ ಬೇಟೆ ಶಿಬಿರಗಳಲ್ಲಿರುವವರು ಊರಿಗೆ ತೆರಳಿ ಅಲ್ಲಿಂದ ವೈರಸ್ ತಂದರೆ ಕಷ್ಟ ಎಂದು ರಜೆ ಕಟ್ ಮಾಡಲಾಗಿದೆ ಎಂದು ತಿಳಿಸಿದರು. ಅರಣ್ಯ ಇಲಾಖೆ ನೌಕರರು ಹಾಗೂ ಸಿಬ್ಬಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ನಮ್ಮ ಅರಣ್ಯ ಇಲಾಖೆಯಲ್ಲಿ ಕೊರೊನಾ ಸೋಂಕು ತಗುಲಿದವರ ಸಂಖ್ಯೆ ಕೂಡ ಕಡಿಮೆ ಎಂದರು.