ಚಾಮರಾಜನಗರ:ಜಿಂಕೆ ಮಾಂಸವನ್ನು ಖರೀದಿಸಿ ಅಡಿಗೆ ತಯಾರಿಲ್ಲಿದ್ದವನ ಜೊತೆಗೆ ಮಾಂಸ ಮಾರಿದವನೂ ಬಲೆಗೆ ಬಿದ್ದಿರುವ ಘಟನೆ, ತಾಲೂಕಿನ ಪುಣಜನೂರು ಸಮೀಪದ ದೊಡ್ಡ ಮೂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಂಸ ಕೊಂಡು ತಂದು ಅಡುಗೆ ತಯಾರಿಯಲ್ಲಿದ್ದ ನಂದೀಶ್ ನಾಯ್ಕ್(36) ಹಾಗೂ ಜಿಂಕೆ ಬೇಟೆಯಾಡಿ ಮಾಂಸ ಮಾರಿದ್ದ ಅದೇ ಗ್ರಾಮದ ರಂಗಸ್ವಾಮಿಯನ್ನು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯ ಅರಣ್ಯಾಧಿಕಾರಿ ಕಾಂತರಾಜು ನೇತೃತ್ವದ ತಂಡ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಜಿಂಕೆ ಮಾಂಸ ಇರುವ ಖಚಿತ ಮಾಹಿತಿ ಮೇರೆಗೆ ಆರ್ಎಫ್ಒ ಕಾಂತರಾಜು ನೇತೃತ್ವದ ತಂಡ ದಾಳಿ ನಡೆಸಿದ ವೇಳೆ 4 ಕಾಲುಗಳು, 24 ಕೆಜಿ ಮಾಂಸ ಕತ್ತರಿಸಿ ಅಡುಗೆ ತಯಾರಿಯಲ್ಲಿದ್ದ ನಂದೀಶ್ ಸಿಕ್ಕಿಬಿದ್ದಿದ್ದಾನೆ. ಬಳಿಕ, ಜಿಂಕೆಯ ಇತರ ಮಾಂಸದ ಬಗ್ಗೆ ವಿಚಾರಿಸಿದಾಗ ರಂಗಸ್ವಾಮಿ ಹೆಸರು ಬಾಯ್ಬಿಟ್ಟಿದ್ದಾನೆ.
ದಾಳಿ ವೇಳೆ 4 ಕಾಲುಗಳು, 24 ಕೆಜಿ ಮಾಂಸ ಪತ್ತೆ ಕೂಡಲೇ ರಂಗಸ್ವಾಮಿ ಮನೆಗೆ ಲಗ್ಗೆ ಇಟ್ಟು ತನಿಖೆ ನಡೆಸಿದಾಗ ಜಿಂಕೆ ಬೇಟೆಯಾಡಿ ಚರ್ಮವನ್ನು ಸುಟ್ಟು ಹಾಕಿ ಮಾಂಸ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಪರಿಶೀಲನೆ ವೇಳೆ ಈತನ ಮನೆಯಲ್ಲಿ 3 ಕೆ.ಜಿ ತೂಗುವ ಆನೆ ದಂತವೂ ಸಿಕ್ಕಿದೆ. ಮೇಲ್ನೋಟಕ್ಕೆ ಇವರಿಬ್ಬರು ಖತರ್ನಾಕ್ ಬೇಟೆಗಾರರು ಎಂಬ ಸಂಶಯ ಮೂಡಿರುವುದರಿಂದ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.