ಚಾಮರಾಜನಗರ : ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಎಂಇಎಸ್ ಪುಂಡರು ನಡೆಸಿದ ದಾಂಧಲೆ, ಇಲ್ಲಿನ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಖಂಡಿಸಿ ನಗರದ 10 ನೇ ದಿನವೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
MES ವಿರುದ್ಧ ಮುಂದುವರೆದ ಪ್ರತಿಭಟನೆ ಚಾ.ರಂ.ಶ್ರೀನಿವಾಸಗೌಡ, ನಿಜದನಿ ಗೋವಿಂದರಾಜು, ಪ್ರಕಾಶ್ ಸೇರಿದಂತೆ 10ಕ್ಕೂ ಮಂದಿ ಅರೆಬೆತ್ತಲೆಯಾಗಿ ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತ್ತದ ತನಕ ಮೆರವಣಿಗೆ ನಡೆಸಿ, ರಸ್ತೆತಡೆದು ಎಂಇಎಸ್ ಕಿಡಿಗೇಡಿಗಳಿಗೆ ಲಾಠಿ ಬೀಸಿ ಏಟು ಕೊಡುವಂತೆ ಆಗ್ರಹಿಸಿದರು.
ಅರೆಬೆತ್ತಲೆಯಾಗಿ ಲಾಠಿ ಹಿಡಿದು ಘೋಷಣೆ ಕೂಗಿದ ಕನ್ನಡಪರ ಹೋರಾಟಗಾರರು, ಕನ್ನಡಿಗರ ತಂಟೆಗೆ ಬಂದರೆ ಲಾಠಿಯಿಂದ ಹೊಡೆಯುತ್ತೇವೆ ಎಂದು ಮಹಾರಾಷ್ಟ್ರ ಸರ್ಕಾರ, ಎಂಇಎಸ್ ಸಂಘಟನೆ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಎಂಇಎಸ್ ಕಿಡಗೇಡಿಗಳು ಕರ್ನಾಟಕದಲ್ಲಿ ಮಾಡಿರುವ ಅಟ್ಟಹಾಸ ಖಂಡನೀಯ. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಬೆಂಬಲವಾಗಿದೆ. ಎಂಇಎಸ್ ವಿರುದ್ಧ ಕರ್ನಾಟಕದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಸಂಪೂರ್ಣವಾಗಿ ಎಂಇಎಸ್ ರದ್ದುಪಡಿಸಬೇಕು. ಮರಾಠಿ ಅಭಿವೃದ್ಧಿ ಪ್ರಾಧಿಕಾರ ರದ್ದು ಮಾಡುವಂತೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ಎಂಇಎಸ್ ವಿರುದ್ಧ ಪ್ರತಿಭಟನೆ ನಡೆಸುವವರ ಮೇಲೆ ಪ್ರಕರಣ ದಾಖಲು ಮಾಡುತ್ತಿರುವುದು ಖಂಡನೀಯ, ಕೂಡಲೇ ಪ್ರಕರಣವನ್ನು ಕೈ ಬಿಡಬೇಕು, 4-5 ಎಂಎಲ್ಎ ಸ್ಥಾನಕ್ಕಾಗಿ 3 ಪಕ್ಷಗಳು ಎಂಇಎಸ್ ಬೆಂಬಲಿಸಿ ರಾಜ್ಯದ ಹಿತವನ್ನು ಬಲಿಕೊಡುತ್ತಿವೆ ಎಂದು ಪ್ರತಿಭಟನಾಕಾರ ಚಾ.ರಂ.ಶ್ರೀನಿವಾಸಗೌಡ ಕಿಡಿಕಾರಿದರು.