ಚಾಮರಾಜನಗರ: ನರೇಗಾ ಕಾಮಗಾರಿಯ ಮೂಲಕ ಜಿಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿ ನೈರ್ಮಲ್ಯ ಗ್ರಾಮ ನಿರ್ಮಾಣಕ್ಕೆ ಮುಂದಾಗಲಾಗಿದೆ. ಗೃಹ ತ್ಯಾಜ್ಯ ನೀರನ್ನು ಚರಂಡಿಗೆ ಹರಿಸುವುದನ್ನು ತಡೆಯಲು ಇಂಗುಗುಂಡಿ ನಿರ್ಮಿಸಲು ಮುಂದಾಗಲಾಗಿದೆ.
ಜಿಲ್ಲೆಯ 50 ಗ್ರಾ.ಪಂ ವ್ಯಾಪ್ತಿಯಲ್ಲಿ 6,500 ಸೋಕ್ ಪಿಟ್ (ಬಚ್ಚಲುಗುಂಡಿ) ನಿರ್ಮಾಣ ಮಾಡುತ್ತಿದ್ದು, ಈಗಾಗಲೇ 1,560 ಗುಂಡಿ ಮುಕ್ತಾಯವಾಗಿದ್ದು, 4,035 ಗುಂಡಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ಬಚ್ಚಲು ಗುಂಡಿಗೆ ಅಂದಾಜು 14 ಸಾವಿರ ವೆಚ್ಚ ತಗುಲಲಿದ್ದು, ಗ್ರಾ.ಪಂಯೇ ಈ ಹಣ ಭರಿಸಲಿದೆ.
ತ್ಯಾಜ್ಯ ನೀರು ನಿರ್ವಹಣೆಗೆ ಇಂಗುಗುಂಡಿಗಳ ನಿರ್ಮಾಣ 8 ಅಡಿ ಉದ್ದ, 4 ಅಡಿ ಅಗಲದ ಗುಂಡಿ ನಿರ್ಮಿಸಿ. ತಳಭಾಗಕ್ಕೆ 3 ಅಡಿ ಜಲ್ಲಿ, 3 ಕಾಂಕ್ರಿಟ್ ರಿಂಗ್‌ಗಳನ್ನು ಬಿಟ್ಟು ಪ್ಲೇಟ್‌ನಿಂದ ಮುಚ್ಚಲಾಗುತ್ತದೆ. ಮನೆಯಲ್ಲಿ ಬಳಿಸಿದ ತ್ಯಾಜ್ಯ ನೀರನ್ನು ಶುದ್ಧಗೊಳಿಸಿ ಭೂಮಿಗೆ ಇಂಗಿಸಲಾಗುತ್ತದೆ.
ಬಹುತೇಕ ಗ್ರಾಮಗಳಲ್ಲಿ ಅನುಪಯುಕ್ತ ನೀರು ಹರಿದುಹೋಗಲು ಸ್ಥಳ ಇರುವುದಿಲ್ಲ. ಹೀಗಿದ್ದಾಗ ಜನರು ರಸ್ತೆ ಇಲ್ಲವೇ ಮನೆ ಸುತ್ತಮುತ್ತ ನೀರು ನಿಲ್ಲಿಸುತ್ತಾರೆ. ಇದು ಚರಂಡಿಗೆ ಸೇರಿದರೆ ಸೊಳ್ಳೆ ಉತ್ಪತ್ತಿ ತಾಣವಾಗುತ್ತದೆ. ಒಂದೆ ಕಡೆ ನೀರು ಸಂಗ್ರಹವಾದರೆ ಕೊಳಚೆ ಪ್ರದೇಶ ನಿರ್ಮಾಣವಾಗುತ್ತದೆ. ಇದನ್ನು ತಪ್ಪಿಸಿ ನೈರ್ಮಲ್ಯ ಕಾಪಾಡಲು ಈ ಬಚ್ಚಲು ಗುಂಡಿಗಳು ವರದಾನವಾಗಿದೆ.
ದೈನಂದಿನ ಬಳಕೆಗೆ ಉಪಯೋಗಿಸಿದ ನಂತರ ಹೊರ ಬರುವ ನೀರನ್ನು ಒಂದೆಡೆ ಸಂಗ್ರಹಿಸಬಹುದು. ನೀರು ಶುದ್ಧವಾಗಿ ಗುಂಡಿ ಸೇರುವಂತೆ ರೂಪಿಸಿರುವುದರಿಂದ ಅಂತರ್ಜಲ ವೃದ್ಧಿಗೂ ಸಹಾಯಕವಾಗಿದೆ.
ಬಹುತೇಕ ಗಿರಿಜನ ಹಾಡಿಗಳಲ್ಲಿ ಈ ಸೋಕ್ ಪಿಟ್ ಕಾಮಗಾರಿ ಭರದಿಂದ ಸಾಗಿದ್ದು, ಮತ್ತಷ್ಟು ಬಚ್ಚಲು ಗುಂಡಿಗಳ ನಿರ್ಮಾಣಕ್ಕೆ ಬೇಡಿಕೆಯೂ ಬಂದಿದೆ. ಸ್ವಚ್ಛ ಗ್ರಾಮ, ಅಂತರ್ಜಲ ವೃದ್ಧಿ ಜೊತೆಗೆ ಉದ್ಯೋಗವೂ ಸಿಗುತ್ತಿದ್ದು ಜನರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.