ಚಾಮರಾಜನಗರ : ಕಾಂಗ್ರೆಸ್ ನೇತೃತ್ವದ ಪ್ರಜಾಧ್ವನಿ ಬಸ್ ಯಾತ್ರೆ ಇಂದು ಚಾಮರಾಜನಗರಕ್ಕೆ ಆಗಮಿಸಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರುವುದು ತಡವಾಗಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಸ್ ಯಾತ್ರೆಯನ್ನು ಆರಂಭಿಸಿದರು. ಇನ್ನು ಪ್ರಜಾಧ್ವನಿ ಯಾತ್ರೆ ಹಿನ್ನೆಲೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಚಾಮರಾಜನಗರದಲ್ಲಿ ರೋಡ್ ಶೋ ನಡೆಸಬೇಕಿತ್ತು. ಸಿದ್ದರಾಮಯ್ಯ ತಡವಾಗಿದ್ದರಿಂದ ಡಿಕೆಶಿ, ಸುರ್ಜೇವಾಲ, ಆರ್.ಧ್ರುವನಾರಾಯಣ್ ಹಾಗೂ ಇನ್ನಿತರ ನಾಯಕರ ಸಮ್ಮುಖದಲ್ಲಿ ಬಸ್ ಯಾತ್ರೆ ನಡೆಯಿತು. ಬಳಿಕ ಚಾಮರಾಜೇಶ್ವರನಿಗೆ ಪೂಜೆ ಸಲ್ಲಿಸಿ ಬಸ್ ಯಾತ್ರೆ ಮೂಲಕ ನಗರದ ರೇಷ್ಮೆ ಕಾರ್ಖಾನೆ ಬಳಿ ಹಮ್ಮಿಕೊಂಡಿದ್ದ ಸಮಾವೇಶದ ವೇದಿಕೆ ಬಳಿಗೆ ಆಗಮಿಸಿದರು.
ಈಗಾಗಲೇ ಉಚಿತ ವಿದ್ಯುತ್ ಹಾಗೂ ಗೃಹಲಕ್ಷ್ಮಿ ಯೋಜನೆ ಘೋಷಿಸಿರುವ ಕೈ ಪಡೆ, ಇಂದು ಚಾಮರಾಜನಗರದಲ್ಲಿ ಆಮ್ಲಜನಕ ದುರಂತದ ಸಂತ್ರಸ್ತರಿಗೆ ಉದ್ಯೋಗ ಹಾಗೂ ಸರ್ಕಾರ ರಚಿಸಿದ ದಿನವೇ 10 ಕೆಜಿ ಅಕ್ಕಿ ನೀಡಲಾಗುವುದು ಎಂಬ ಭರವಸೆ ನೀಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈ ಬಾರಿ ಚುನಾವಣೆ ನಡೆಯುತ್ತಿರುವುದು ಸತ್ಯ ಹಾಗೂ ಸುಳ್ಳಿನ ನಡುವೆ. ಬಿಜೆಪಿ ಅವರದ್ದು ಬಾಯಿ ಬಿಟ್ಟರೆ ಬರೀ ಸುಳ್ಳು. ಬಿಜೆಪಿಯವರು ಕರ್ನಾಟಕಕ್ಕೆ ಕಳಂಕ ತಂದಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ 136 ಸೀಟ್ ಗೆಲ್ಲಲಿದೆ :ಬಿಜೆಪಿ ಅವರ ಬಗ್ಗೆ ಪಾಪದ ಪುರಾಣ ಎಂಬ ಕಿರುಸಂಚಿಕೆ ಹೊರ ತಂದಿದ್ದು ಅದನ್ನು ಶೀಘ್ರ ನಿಮ್ಮ ಮನೆಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಗೃಹಲಕ್ಷೀ ಯೋಜನೆಗೆ ನಾನು ಹಾಗೂ ಸಿದ್ದರಾಮಯ್ಯ ಸಹಿ ಮಾಡಿರುವ ಚೆಕ್ ಕೂಡ ಕೊಡುತ್ತೇವೆ. ಆಮ್ಲಜನಕ ದುರಂತದ ಸಂತ್ರಸ್ತರಿಗೆ ನೌಕರಿ ಕೊಡುತ್ತೇವೆ ಎಂದು ಘೋಷಿಸಿದರು. ಕಣ್ಣು, ಕಿವಿ ಹಾಗೂ ಹೃದಯವಿಲ್ಲದ ಈ ಸರ್ಕಾರವನ್ನು ಈ ಬಾರಿ ಕಿತ್ತೊಗೆಯಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 136 ಸೀಟ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಬ್ಬರಿಗೆ 6 ಸಾವಿರ ರೂ. ಕೊಡುತ್ತೇನೆ ಎಂದು ಶಾಸಕನೊಬ್ಬ ಹೇಳಿದ್ದಾನೆ. ಅವನ ಹೆಸರನ್ನು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲ್ಲ. ಬಿಜೆಪಿ ಅವರು ಕೊಟ್ಟ 600 ಭರವಸೆಗಳಲ್ಲಿ 50 ಕೂಡ ಈಡೇರಿಲ್ಲ. ಈ ರೀತಿ ಸರ್ಕಾರ ಬೇಕಾ..? ಎಂದು ಪ್ರಶ್ನಿಸಿದರು.
ಸುಧಾಕರ್ ಸುಳ್ಳಿನ ಸರದಾರ..ಬಂಡಲ್ ಸಚಿವ ಸೋಮಣ್ಣ: ಬಳಿಕ ಮಾತನಾಡಿದ ಸಿದ್ದರಾಮಯ್ಯ, ಇದು ಡಬಲ್ ಇಂಜಿನ್ ಸರ್ಕಾರವಲ್ಲ. ಇದು ಇಂಜಿನ್ ಇಲ್ಲದ ಸರ್ಕಾರ. ಸಬ್ ಕಾ ಸಾಥ್ ನಲ್ಲಿ ದಲಿತರಿಲ್ಲ, ಹಿಂದುಳಿದವರಿಲ್ಲ, ಅಲ್ಪಸಂಖ್ಯಾತರಿಲ್ಲ, ರೈತರಿಲ್ಲ. ಇದರ ಫಲಾನುಭವಿಗಳು ಅಂಬಾನಿ, ಅದಾನಿ, ಬಿಜೆಪಿಯ ಪುಡಾರಿಗಳು ಹಾಗೂ ಮಂತ್ರಿಗಳು ಎಂದು ಟೀಕಿಸಿದರು. ಮೋದಿ ಅವರು ನಮ್ಮ ಪ್ರಧಾನಿಗಳು. ಅವರ ಬಗ್ಗೆ ಗೌರವವಿದೆ. ಆದರೆ ಅವರು ಹೇಳಿರುವ ಸುಳ್ಳುಗಳನ್ನು ಹೇಳಬೇಕಲ್ಲಾ..? ಬಿಜೆಪಿ ಎಂಬುದೇ ಒಂದು ಸುಳ್ಳಿನ ಫ್ಯಾಕ್ಟರಿ. ಸಚಿವ ಸುಧಾಕರ್ ಸುಳ್ಳಿನ ಸರದಾರ. ಅವನ ಕೈಯಲ್ಲಿ ನನ್ನ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದಾರೆ. ಅಲಿಬಾಬಾ ಮತ್ತು 40 ಕಳ್ಳರು ಎಂಬ ಗುಂಪಿನಲ್ಲಿ ಆತನೂ ಸದಸ್ಯ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸವಾಲ್ :ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಕರೆಯುತ್ತಿದ್ದಾರೆ. ಅವರು ವಿಪಕ್ಷದಲ್ಲಿದ್ದಾಗ ಏಕೆ ಮಾತನಾಡಲಿಲ್ಲ. ಈಗ ಕಾಂಗ್ರೆಸ್ ಕಾಲದಲ್ಲೂ ಭ್ರಷ್ಟಾಚಾರ ಇತ್ತು ಎಂದು ಸುಳ್ಳು ಹೇಳುತ್ತಿದ್ದಾರೆ. ಬೊಮ್ಮಾಯಿ ಅವರಿಗೆ ತಾಕತ್ ಇದ್ದರೆ, ಧಂ ಇದ್ದರೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ನಾವು ಮಾಡಿರುವ ಆರೋಪಗಳ ಬಗ್ಗೆ ತನಿಖೆ ಮಾಡಿಸಲಿ. ಯಾರಿಗೆ ಶಿಕ್ಷೆ ಆಗಲಿದೆ ಎಂಬುದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.
ಅಧಿಕಾರಕ್ಕೆ ಬಂದ ದಿನವೇ 200 ಯುನಿಟ್ ಉಚಿತ ವಿದ್ಯುತ್ , ಗೃಹಲಕ್ಷ್ಮಿ ಯೋಜನೆ ಜಾರಿಗಾಗಿ ಆದೇಶ ಹೊರಬೀಳಲಿದೆ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆಯುವ ಸರ್ಕಾರ. ನಾವು ಮಂಜೂರು ಮಾಡಿದ ಮನೆಗಳಿಗೆ ಅವರು ಇನ್ನೂ ಹಣ ಕೊಟ್ಟಿಲ್ಲ. ಅಷ್ಟು ಮನೆ - ಇಷ್ಟು ಮನೆ ಎಂದು ಸಚಿವ ಸೋಮಣ್ಣ ಬರೀ ಬಂಡಲ್ ಬಿಡುತ್ತಾರೆ. ನಾವು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿಗೆ ಪ್ರಾಧಿಕಾರ ಮಾಡಿದೆವು. ಈಗ ಅವರು ಬಂದು ಮಂಗಳಾರತಿ ತೆಗೆದುಕೊಳ್ಳುತ್ತಿದ್ದಾರೆ. ವಾಲ್ಮೀಕಿ ನಿಗಮಕ್ಕೆ ನಾನು 200 ಕೋಟಿ ಕೊಟ್ಟಿದ್ದೆ. ಈಗ 80 ಕೋಟಿ ಹಣ ಕೊಟ್ಟಿದ್ದಾರೆ. ಮನ್ ಕಿ ಬಾತ್ ಎನ್ನುವ ಮೋದಿ ಇಲ್ಲಿಯ ತನಕ ರೈತರ ಸಮಸ್ಯೆ, ನಿರುದ್ಯೋಗ ಬಗ್ಗೆ ಒಂದು ಮಾತನಾಡಿಲ್ಲ. ರಾಜ್ಯದ ಭ್ರಷ್ಟಾಚಾರದಲ್ಲಿ ಅವರು ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.