ಚಾಮರಾಜನಗರ :ಈ ಬಾರಿ ಬಿಜೆಪಿ ಅಭ್ಯರ್ಥಿ ಹಾಗು ಸಚಿವ ವಿ.ಸೋಮಣ್ಣ ಚಾಮರಾಜನಗರದಲ್ಲಿ ಗೆದ್ದೇ ಬಿಡುತ್ತಾರೆ ಎಂಬ ಕಮಲ ಕಲಿಗಳ ಅತ್ಯುತ್ಸಾಹಕ್ಕೆ ಮತದಾರರು ತಣ್ಣೀರೆರಚಿದ್ದಾರೆ. ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಸತತ ನಾಲ್ಕನೇ ಬಾರಿಗೆ ಚಾಮರಾಜನಗರದ ಗದ್ದುಗೆ ಏರಿದ್ದಾರೆ. ಪುಟ್ಟರಂಗಶೆಟ್ಟಿ ಕೃಷಿಯಲ್ಲಿ ವಿಶೇಷ ಆಸಕ್ತಿ ಇರುವ ಜನಪ್ರತಿನಿಧಿ. ತೆಂಗಿನ ಮರವನ್ನು ಸರಸರನೆ ಏರಬಲ್ಲ ನಿಷ್ಣಾತ. ಆ ಕಲೆಯನ್ನೇ ರಾಜಕೀಯದಲ್ಲಿ ಕರಗತ ಮಾಡಿಕೊಂಡಿರುವುದು ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ:ಪ್ರಿಯಾಂಕ್ ಖರ್ಗೆಗೆ ಹ್ಯಾಟ್ರಿಕ್ ಗೆಲುವು: ಮಣಿಕಂಠ ರಾಠೋಡ್ ವಿರುದ್ಧ 13,638 ಮತಗಳ ಅಂತರದ ಜಯ
ಲಿಂಗಾಯತ ಪ್ರಾಬಲ್ಯದ ಕ್ಷೇತ್ರವಾದ ಚಾಮರಾಜನಗರದಲ್ಲಿ ಇದೇ ಸಮುದಾಯದ ಪ್ರಬಲ ನಾಯಕ ವಿ.ಸೋಮಣ್ಣ ಸ್ಪರ್ಧೆ ಮಾಡಿದ್ದರೂ ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆದ್ದು ತಾನು ಸೋಲಿಲ್ಲದ ಸರದಾರ ಎಂದು ತೋರಿಸಿದ್ದಾರೆ. ಸೋಮಣ್ಣ ಬಂದ ಬಳಿಕ ಚಾಮರಾಜನಗರ ಹೈವೋಲ್ಟೆಜ್ ಕ್ಷೇತ್ರವಾಗಿ ಬದಲಾಗಿತ್ತು. ಸೋಮಣ್ಣ ಚಾಮರಾಜನಗರ ಮತದಾರರಾಗಿಯೂ ಬದಲಾಗಿದ್ದರು. ಆದರೆ, ಎಲ್ಲದಕ್ಕೂ ಮತದಾರರು ಮತಯಂತ್ರದ ಮೂಲಕವೇ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ:ಚಾಮರಾಜನಗರದಲ್ಲಿ 3 ಕಾಂಗ್ರೆಸ್, 1 ಜೆಡಿಎಸ್: ಗೆದ್ದ ನಾಲ್ವರು ಅಭ್ಯರ್ಥಿಗಳು ಹೇಳುವುದೇನು?
ಚಾಮರಾಜನಗರದ ಮತ ಎಣಿಕೆ ಒಟ್ಟು 18 ಸುತ್ತುಗಳಲ್ಲಿ ನಡೆಯಿತು. ಆದರೆ, ಬಿಜೆಪಿಯ ಯಾವುದೇ ತಂತ್ರಗಳು ಕ್ಷೇತ್ರದಲ್ಲಿ ಕೆಲಸ ಮಾಡಲಿಲ್ಲ. ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ್ದ ಪುಟ್ಟರಂಗಶೆಟ್ಟಿ 2,4,6,8 ಸಾವಿರ.. ಹೀಗೆ ಅಂತರವನ್ನು ಹೆಚ್ಚಿಸಿಕೊಂಡು ಕೊನೆಗೆ ಗೆಲುವಿನ ದಡ ತಲುಪಿದರು. ಓರ್ವ ಪ್ರಬಲ ನಾಯಕ ಸ್ಪರ್ಧೆಗೂ ಬಗ್ಗದ ಪುಟ್ಟರಂಗಶೆಟ್ಟಿ ಗೆಲುವಿನ ಯಾವುದೇ ಹಾದಿಯನ್ನು ಸೋಮಣ್ಣಗೆ ಬಿಟ್ಟುಕೊಡದೇ 16 ಸುತ್ತಿನಿಂದಲೇ ಗೆಲುವಿನ ನಗೆ ಆರಂಭಿಸಿ 18 ಸುತ್ತಿನಲ್ಲಿ ವಿಜಯಿಯಾದರು.