ಚಾಮರಾಜನಗರ: ಪುನೀತ್ ರಾಜ್ಕುಮಾರ್ ನಿಧನದ ಹಿನ್ನೆಲೆಯಲ್ಲಿ ತಾಲೂಕಿನ ನಲ್ಲೂರುಮೋಳೆ ಗ್ರಾಮಸ್ಥರೆಲ್ಲರೂ ಸೇರಿ ಪುಣ್ಯಸ್ಮರಣೆ ಆಚರಿಸಿದರು.
ನಲ್ಲೂರುಮೋಳೆ ಗ್ರಾಮದಲ್ಲಿರುವ ಅಪ್ಪು ಅಭಿಮಾನಿಗಳು ಇಡೀ ಊರಿಗೆ ಡಂಗೂರ ಸಾರಿ 'ಯಾರೂ ಕೂಲಿ ಕೆಲಸಕ್ಕೆ ಹೋಗದೆ, ಅಪ್ಪು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಬೇಕು' ಎಂದು ನಿನ್ನೆ ರಾತ್ರಿ ಕೋರಿಕೊಂಡಿದ್ದಾರೆ. ಅದರಂತೆ ಇಂದು ಮಕ್ಕಳು, ಮಹಿಳೆಯರಾದಿಯಾಗಿ ಪುನೀತ್ ಕಟೌಟಿಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಿದರು. ಜೊತೆಗೆ, ಅಭಿಮಾನಿಗಳು ತಮ್ಮ ಹಣದಿಂದಲೇ ಇಡೀ ಗ್ರಾಮಕ್ಕೆ ಊಟ ಹಾಕಿಸಿ ಅಗಲಿದ ನಟನಿಗೆ ಗೌರವ ಸಲ್ಲಿಸಿದರು.
'ನಮ್ಮ ಗ್ರಾಮದಲ್ಲಿ ರಾಜ್ಕುಮಾರ್, ಅಪ್ಪು ಅವರ ಅಭಿಮಾನಿಗಳೇ ಹೆಚ್ಚು. ಯುವಕರು ಪುಣ್ಯಸ್ಮರಣೆ ಮಾಡುವುದಾಗಿ ಹೇಳಿದ್ದರಿಂದ ನಾವೆಲ್ಲರೂ ಸಾಥ್ ನೀಡಿದ್ದೇವೆ. ನಮ್ಮ ಊರಿನಲ್ಲಿ ಯಾರೂ ಇಂದು ಕೂಲಿಗೆ ಹೋಗದೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವಾರದಲ್ಲಿ ಗ್ರಾಮಸ್ಥರೆಲ್ಲರೂ ಅಪ್ಪು ಸಮಾಧಿ ಸ್ಥಳಕ್ಕೆ ತೆರಳಿ ಪ್ರಾರ್ಥಿಸಲಿದ್ದೇವೆ' ಎಂದು ಗ್ರಾಮಸ್ಥ ಸುಂದರ್ ತಿಳಿಸಿದರು.