ಚಾಮರಾಜನಗರ: ಇದೇ ಅಕ್ಟೋಬರ್ 7 ರಂದು ಚಾಮರಾಜನಗರ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುತ್ತಾರೆಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಬಿಳಿಗಿರಿರಂಗನ ಬೆಟ್ಟದಲ್ಲಿನ ಹೆಲಿಪ್ಯಾಡ್ ಸ್ಥಳ ಪರಿಶೀಲಿಸಿದ ನಂತರ ಮಾತನಾಡಿ, ದಸರಾ ಉದ್ಘಾಟನಾ ಕಾರ್ಯಕ್ರಮದ ಬಳಿಕ ರಾಮನಾಥ್ ಕೋವಿಂದ್ ಅವರೊಟ್ಟಿಗಿನ ಭೋಜನ ಕೂಟದಲ್ಲಿ ಸಿಎಂ ಭಾಗಿಯಾಗಿ, ಮೆಡಿಕಲ್ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಅದಕ್ಕೂ ಮುನ್ನ ನಾನು ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿ ಸಿಎಂ ಅವರ ಗಮನಕ್ಕೆ ತರಬೇಕಾದ ವಿಚಾರಗಳನ್ನು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.