ಚಾಮರಾಜನಗರ: ಕೊರೊನಾ ಮುಕ್ತವಾಗಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಗೊಳಿಸಲು ಸಿಎಂ ನಿರ್ಧರಿಸಿದ್ದಾರೆಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಚಾಮರಾಜನಗರದ ಎಪಿಎಂಸಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಕೊರೊನಾ ಮುಕ್ತ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತ ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತಿದ್ದು ಸಾಧಕ- ಬಾಧಕ ಆಲೋಚಿಸುತ್ತೇವೆ. ಗುರುವಾರ ಇಲ್ಲವೇ ಶುಕ್ರವಾರ ಬಿಎಸ್ವೈ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಜುಬಿಲಂಟ್ನ ಎಲ್ಲಾ ನೌಕರರ ಗಂಟಲು ದ್ರವ ಹಾಗೂ ರಕ್ತ ಮಾದರಿಯ ಪರೀಕ್ಷೆಯ ವರದಿ ಇಂದು ಮಧ್ಯಾಹ್ನದೊಳಗೆ ಕೈ ಸೇರಲಿದ್ದು, ಎಲ್ಲರದ್ದೂ ಪರೀಕ್ಷೆ ಮುಗಿದಂತಾಗಲಿದೆ. ಜುಬಿಲಂಟ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಯುತ್ತಿದೆ. ಕಾರ್ಖಾನೆಗೆ ಯಾವ ದೇಶಗಳಿಂದ ಬಂದಿದ್ದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಜುಬಿಲಂಟ್ಹಾಗೂ ತಬ್ಲಿಘಿ ಇಲ್ಲದಿದ್ದರೇ ಮೈಸೂರಿನಲ್ಲಿ 3-4 ಕೋವಿಡ್ ಪ್ರಕರಣಗಳು ಇರುತ್ತಿದ್ದವಷ್ಟೇ ಎಂದು ಅಭಿಪ್ರಾಯಪಟ್ಟರು.
ಕೊರೊನಾಮುಕ್ತ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆಗೆ ಸಿಎಂ ಚಿಂತನೆ ಇದೇ ವೇಳೆ ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಇಡೀ ಪ್ರಪಂಚವೇ ಕೊರೊನಾಗೆ ಸಿಲುಕಿದೆ. ಕೋವಿಡ್ ಬಂದಂತಹ ವ್ಯಕ್ತಿಗಳನ್ನು ಪರೀಕ್ಷೆಗೊಳಪಡಿಸಲು ಅಧಿಕಾರವಿದೆ. ಎಂಎಲ್ಎಯನ್ನು ಕೇಳಿಕೊಂಡು ಬರಬೇಕು, ಅವರು ಅವಿದ್ಯಾವಂತರು ಎನ್ನುವುದು ಸರಿಯಲ್ಲ. ರೌಡಿಸಂ, ಮ್ಯಾನ್ ಹ್ಯಾಂಡಲಿಂಗ್ ಮಾಡುವುದು ಸರಿಯಲ್ಲ. ಗಲಭೆಕೋರರನ್ನು ಎರಡು ವರ್ಷ ಜೈಲಿಗೆ ಕಳಿಸಲೇ ಬೇಕು ಇಲ್ಲದಿದ್ದರೆ ವೈದ್ಯರು, ಆಶಾ ಕಾರ್ಯಕರ್ತೆಯರು ಹೇಗೆ ತಾನೆ ಕೆಲಸ ಮಾಡಲು ಮುಂದೆ ಬರುತ್ತಾರೆ ಎಂದು ಕಿಡಿಕಾರಿದರು.
ಸಹಕಾರ ಬ್ಯಾಂಕ್ಗಳಿಂದ ಹೊಸದಾಗಿ ಸಾಲ ಕೊಡಲು ಸರ್ಕಾರ ತೀರ್ಮಾನಿಸಿದ್ದು, ಕಳೆದ ಬಾರಿ 13 ಸಾವಿರ ಕೋಟಿ ರೂ. ಸಾಲ ನೀಡಲಾಗಿತ್ತು.ಈ ಬಾರಿಯೂ ಅಷ್ಟೇ ನೀಡಲಾಗುತ್ತದೆ. ಲೇವಾದೇವಿಗಾರರು, ಖಾಸಗಿ ಫೈನಾನ್ಸ್ ಕಂಪನಿಗಳು ಯಾರೂ ಕೂಡ 3 ತಿಂಗಳವರೆಗೆ ಸಾಲ ಕಟ್ಟುವಂತೆ ಕಿರುಕುಳ ನೀಡಬಾರದೆಂದು ಈಗಾಗಲೇ ಸರ್ಕಾರ ಆದೇಶಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.