ಚಾಮರಾಜನಗರ:ವಿಧಾನಸಭೆ ಕಲಾಪಕ್ಕೆ ವಿದ್ಯುನ್ಮಾನ ಮಾಧ್ಯಮಗಳನ್ನು ನಿರ್ಬಂಧಿಸಿ ಸಿಎಂ ಯಡಿಯೂರಪ್ಪ ನಾಟಕ ಆಡ್ತಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್, ಶಾಸಕರು, ಸಚಿವರನ್ನು ಯಡಿಯೂರಪ್ಪ ಕಂಟ್ರೋಲ್‌ನಲ್ಲಿಟ್ಟಿಕೊಂಡು ಮಾಧ್ಯಮಗಳನ್ನು ಕಲಾಪಕ್ಕೆ ನಿರ್ಬಂಧ ಹೇರಿ ಬಳಿಕ ಸ್ಪೀಕರ್ ಮಾಡಿದ್ದಾರೆ ಎಂದು ನಾಟಕವಾಡುತ್ತಿದ್ದಾರೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯುವುದಿಲ್ಲವೇ, ಸ್ಪೀಕರ್ ದೊಡ್ಡ ಅವಿವೇಕಿ. ಯಾರ ಮಾತನ್ನೂ ಅವರು ಕೇಳಬಾರದು ಎಂದರು.
ವಾಟಾಳ್ ನಾಗರಾಜ್ ಆಕ್ರೋಶ.. ವಿಪಕ್ಷಗಳು ಮಾಧ್ಯಮ ನಿರ್ಬಂಧದಲ್ಲಿ ನಾಟಕ ಮಾಡುತ್ತಿವೆ. ನಾನೇನಾದರೂ ಶಾಸಕನಾಗಿದ್ದರೆ ಸಮಸ್ಯೆ ಬಗೆಹರಿಸುತ್ತಿದ್ದೆ. ಕಲಾಪಕ್ಕೆ ಮಾಧ್ಯಮರವರನ್ನು ಕರೆದೊಯ್ಯುತ್ತಿದ್ದೆ ಎಂದು ಅಭಿಪ್ರಾಯಪಟ್ಟರು.ಇನ್ನು, ಬಂಡೀಪುರ-ಕೇರಳ ಹಗಲು ಸಂಚಾರವನ್ನು ಬಂದ್ ಮಾಡಲಾಗುತ್ತದೆ ಎಂಬ ಹುಯಿಲು ಹಬ್ಬಿಸುತ್ತಿದ್ದಾರೆ. ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಲು ಟಿಂಬರ್ ಮಾಫಿಯಾ ಕೈ ಹಾಕಿದ್ದು, ರಾಜ್ಯ ಸರ್ಕಾರ ಯಾವ ಒತ್ತಡಕ್ಕೂ ಮಣಿಯದೇ ಸುಪ್ರೀಂಕೋರ್ಟಿನಲ್ಲಿ ಬಲವಾದ ವಾದ ಮಂಡಿಸಬೇಕು ಎಂದು ಒತ್ತಾಯಿಸಿದರು.
ಚಾಮರಾಜನಗರ ಹಾಗೂ ರಾಜ್ಯದಲ್ಲಿ ಮರಳು ಮಾಫಿಯಾ ಜೋರಾಗಿದ್ದು ದೊಡ್ಡ ದೊಡ್ಡ ಕುಳಗಳೇ ಇದರ ಹಿಂದಿದ್ದಾರೆ. ಜಿಲ್ಲೆಯಲ್ಲಿ ಗ್ರಾನೈಟ್ ಲೂಟಿಯಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಈ ಕುರಿತು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿ ಸಿಬಿಐ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.