ಚಾಮರಾಜನಗರ: ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಇಂದು ಬಿ.ಎಸ್.ಯಡಿಯೂರಪ್ಪ ಆಗಮಿಸುತ್ತಿದ್ದು, ಜಿಲ್ಲಾ ಕೇಂದ್ರಕ್ಕೆ ಬಾರದಿದ್ದರೂ ವಿಶೇಷ ಅನುದಾನ ಘೋಷಿಸುವ ನೀರಿಕ್ಷೆಯಲ್ಲಿ ಜನರಿದ್ದಾರೆ.
ಹೌದು ಪ್ರವಾಸೋದ್ಯಮ ಅಭಿವೃದ್ಧಿ, ಕೈಗಾರಿಕೋದ್ಯಮಿಗಳ ಆಕರ್ಷಣೆ, ರೇಷ್ಮೆಗೆ ಉತ್ತೇಜನ, ಕಾಡಂಚಿನ ಜನರಿಗೆ ಮೂಲಸೌಕರ್ಯ ಕಲ್ಪಿಸಲು ವಿಶೇಷ ಯೋಜನೆ ಇಲ್ಲವೇ ಅನುದಾನವನ್ನು ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಜನರು ಹೊಂದಿದ್ದು, ಬಿಎಸ್ವೈ ಭಾಷಣದತ್ತ ಜಿಲ್ಲೆಯ ಜನರ ಚಿತ್ತ ನೆಟ್ಟಿದೆ.
ಜಿಲ್ಲೆಯ ಜನತೆಯ ವಲಸೆ ತಪ್ಪಿಸುವ ಸಲುವಾಗಿ ಬಹು ನಿರೀಕ್ಷೆಯಿಂದ ಆರಂಭಿಸಲಾದ ಚಾಮರಾಜನಗರ ತಾಲೂಕಿನ ಬದನಗುಪ್ಪೆ - ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿಲ್ಲ. ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾದರೂ ಇದುವರೆಗೂ ಈ ಪ್ರದೇಶದಲ್ಲಿ ಕೈಗಾರಿಕೆಗಳು ತಲೆ ಎತ್ತಿಲ್ಲ. ಈಗಾಗಲೇ ಕೈಗಾರಿಕಾ ಪ್ರದೇಶ ಚಾಲನೆ ಸಂದರ್ಭರ್ದಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದವರೂ ಇದೀಗ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿರುವುದರಿಂದ ಕೈಗಾರಿಕೋದ್ಯಮಿಗಳನ್ನು ಕರೆತರುವ ನಿಟ್ಟಿನಲ್ಲಿ ಯಡಿಯೂರಪ್ಪ ಭರವಸೆಯ ಮಾತುಗಳನ್ನಾಡಲಿದ್ದಾರೆ ಎಂಬ ನಿರೀಕ್ಷೆ ಗರಿಗೆದರಿದೆ.