ಬೆಂಗಳೂರು :ಚಾಮರಾಜನಗರಕ್ಕೆ ಹೋದಲ್ಲಿ ಅಧಿಕಾರ ಹೋಗಲಿದೆ ಎನ್ನುವ ಮೌಢ್ಯದ ನಡುವೆ ಮುಖ್ಯಮಂತ್ರಿ ಆದ ನಂತರ ಚಾಮರಾಜನಗರ ಜಿಲ್ಲೆಗೆ ಬಸವರಾಜ ಬೊಮ್ಮಾಯಿ ಅವರ ಮೊದಲ ಪ್ರವಾಸ ನಿಗದಿಯಾಗಿದೆ. ಅಕ್ಟೋಬರ್ 7ರಂದು ನೂತನ ವೈದ್ಯಕೀಯ ಕಾಲೇಜು ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಚಾಮರಾಜನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಅಕ್ಟೋಬರ್ 7ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 3.30 ರಿಂದ 4.30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ.
ಚಾಮರಾಜನಗರಕ್ಕೆ ಹೋದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಗಲಿದೆ ಎನ್ನುವ ಮೂಢ ನಂಬಿಕೆ ಇರುವ ಹಿನ್ನೆಲೆ ಮಾಜಿ ಮುಖ್ಯಮಂತ್ರಿಗಳಾದ ಜೆ ಹೆಚ್ ಪಟೇಲ್, ಎಸ್ ಎಂ ಕೃಷ್ಣ, ಬಿ ಎಸ್ ಯಡಿಯೂರಪ್ಪ, ಸದಾನಂದಗೌಡ ಚಾಮರಾಜನಗರಕ್ಕೆ ಭೇಟಿ ನೀಡಿರಲಿಲ್ಲ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮೊದಲ ಬಾರಿ ಸಿಎಂ ಆದಾಗ ಭೇಟಿ ನೀಡಿದ ನಂತರ ಅಧಿಕಾರದಿಂದ ಕೆಳಗಿಳಿದಿದ್ದರು. ಎರಡನೇ ಬಾರಿ ಸಿಎಂ ಆದಾಗ ಭೇಟಿ ನೀಡಿರಲಿಲ್ಲ.
ಆದರೆ, ಸಿದ್ದರಾಮಯ್ಯ ಮಾತ್ರ 9 ಬಾರಿ ಹೋಗಿ ಬಂದಿದ್ದರು. ಈಗಲೂ ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ 4ನೇ ಬಾರಿ ಸಿಎಂ ಆದರೂ ಭೇಟಿ ನೀಡಿರಲಿಲ್ಲ. ಈಗ ಅವರದೇ ಪಕ್ಷದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದು, ಸಮಾಜವಾದಿ ಹಿನ್ನೆಲೆ ಹೊಂದಿರುವ ಅವರು ಮುಖ್ಯಮಂತ್ರಿ ಆಗಿ ಮೂರು ತಿಂಗಳಿನಲ್ಲೇ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಓದಿ:ರಾಷ್ಟ್ರಪತಿ ಪ್ರವಾಸ: ಸಿಎಂ ಚಾಮರಾಜನಗರಕ್ಕೆ ಬರ್ತಾರೆ- ಸಚಿವ ಎಸ್.ಟಿ.ಸೋಮಶೇಖರ್