ಚಾಮರಾಜನಗರ: ಬಳಸಿ ಬಿಸಾಡಿದ ವಾಟರ್ ಬಾಟಲ್ಗಳ ಬಳಸಿ ಪೌರಕಾರ್ಮಿಕರು ವಿವಿಧ ಮಾದರಿಯ ಅಲಂಕಾರಿಕ ವಸ್ತುಗಳ ತಯಾರಿಸಿ ಗಮನ ಸೆಳೆದಿದ್ದಾರೆ. ಹಳೆಯ ಬಾಟಲ್ಗಳನ್ನು ಪಕ್ಷಿಗಳಿಗೆ ನೀರಿಡಲು ಬಳಸಿದ್ದಾರೆ. ಪ್ಲಾಸ್ಟಿಕ್ ಬಾಟಲ್ಗಳ ಸಹಾಯದಿಂದ ಕುರ್ಚಿ ತಯಾರಿಸಿ, ವಿವಿಧ ಕಲಾಕೃತಿ ನಿರ್ಮಿಸಿದ್ದಾರೆ.
ನಗರದ ಚಾಮರಾಜೇಶ್ವರ ದೇಗುಲ ಮುಂಭಾಗವಿರುವ ಉದ್ಯಾನವನದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಶ್ರಮವಹಿಸಿ ಸ್ವಚ್ಛತಾ ಕಾರ್ಯ ನೆರವೇರಿಸಿ ಸ್ಥಳದಲ್ಲಿ ಕಲಾಕೃತಿಗಳ ಸ್ಥಾಪನೆ ಮಾಡಿದ್ದಾರೆ.
ಒಣ ಕಸ ಬಳಸಿ ಅಲಂಕಾರಿಕ ವಸ್ತು ರಚಿಸಿದ ಪೌರಕಾರ್ಮಿಕರು ಅಲ್ಲದೆ ಮದ್ಯದ ಬಾಟಲ್ಗಳನ್ನು ಬಳಸಿ ಸ್ವಚ್ಛ ಭಾರತ್ ಲೋಗೋ ರೂಪಿಸಿದ್ದಾರೆ. ಕಲಾವಿದರೊಬ್ಬರನ್ನು ಕರೆಯಿಸಿ ಕಲ್ಲಿನ ಮೇಲೆ ಗಣಪತಿ ಚಿತ್ರವನ್ನು ಬಿಡಿಸಿದ್ದು, ಉದ್ಯಾನದಲ್ಲಿ ಹಲವು ಚಿತ್ರಗಳನ್ನು ಮೂಡಿಸಿದ್ದಾರೆ.
ಹಿರಿಯ ಆರೋಗ್ಯ ನಿರೀಕ್ಷಕ ಶರವಣ ಹಾಗೂ ಪರಿಸರ ಇಂಜಿನಿಯರ್ ಗಿರಿಜಾ ನೇತೃತ್ವದಲ್ಲಿ ನಗರಸಭೆಯ ಟ್ರ್ಯಾಕ್ಟರ್ ಚಾಲಕ ಶಿವನಂಜ, ಪೌರಕಾರ್ಮಿಕರಾದ ತಂಗವೇಲು, ಪಿ.ರಾಜೇಂದ್ರ, ಶಕೀಲ್, ಎಸ್.ರಾಜೇಂದ್ರ, ಶಿವರಾಜು, ಅಜಿತ್, ಸುಜಿತ್ ಸೇರಿದಂತೆ 15 ಮಂದಿ 4 ದಿನ ಶ್ರಮವಹಿಸಿ ಈ ಜಾಗೃತಿ ಕಲೆಗೆ ಮುಂದಾಗಿದ್ದಾರೆ.
ಈ ಕುರಿತು ನಗರಸಭೆ ಆಯುಕ್ತ ರಾಜಣ್ಣ ಮಾತನಾಡಿ, ತ್ಯಾಜ್ಯ ವಿಲೇವಾರಿ ಹೊತ್ತಿನಲ್ಲಿ ಒಣಕಸವನ್ನು ಬೇರ್ಪಡಿಸಿ ಕಳೆ, ಮುಳ್ಳು ಬೆಳೆದಿದ್ದ ಉದ್ಯಾನವನದ ಒಂದು ಭಾಗದಲ್ಲಿ ಕಲಾಕೃತಿಗಳ ಸೃಷ್ಟಿಸಿದ್ದಾರೆ. ಈಗಾಗಲೇ ನಾಗರಿಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಕಸ ವಿಂಗಡಣೆ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ಪೌರಕಾರ್ಮಿಕರ ಜಾಗೃತಿ ಇದಾಗಿದೆ ಎಂದು ತಿಳಿಸಿದರು.
ಇದು ಕೇವಲ ಆರಂಭಿಕ ಹಂತವಾಗಿದ್ದು ಗಿಡಗಳ ಪಾಲನೆಗಾಗಿ ಮರದ ತಡೆಗೋಡೆ, ಬಾಗಿಲುಗಳು, ಸ್ವಚ್ಛತೆ ಅರಿವಿಗಾಗಿ ಭಿತ್ತಿಪತ್ರಗಳ ಪ್ರದರ್ಶನವನ್ನು ಪೌರಕಾರ್ಮಿಕರು ಮಾಡಲಿದ್ದಾರೆ ಎಂದಿದ್ದಾರೆ.