ಕೊಳ್ಳೇಗಾಲ: ಜಾತಿ ಪ್ರಮಾಣ ಪತ್ರ ನೀಡದ ಹಿನ್ನೆಲೆ ಭೋವಿ ಜನಾಂಗದ ಮಕ್ಕಳು ಪರಾದಾಡುವ ಪರಿಸ್ಥಿತಿ ಉಂಟಾಗಿರುವ ಘಟನೆ ಹೊಂಡರುಬಾಳು ಗ್ರಾಮದಲ್ಲಿ ಜರುಗಿದೆ. ಭೋವಿ ಜನಾಂಗದ ಜಾತಿ ಪ್ರಮಾಣ ಪತ್ರ ಕೊಡುವವರೆಗೂ ನಾವು ಶಾಲೆಗೆ ಹೋಗಲ್ಲ ಎಂದು ಮಕ್ಕಳು ಪಟ್ಟು ಹಿಡಿದಿದ್ದು, ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ. ಗ್ರಾಮದ ವಡ್ಡರ ಜನಾಂಗದ ಭೋವಿ ಸಮುದಾಯ ಭವನದ ಮುಂಭಾಗ ಸಮಾವೇಶಗೊಂಡ ಭೋವಿ ಜನಾಂಗದ ಮಕ್ಕಳು, ಪೋಷಕರು ಜಾತಿ ಪ್ರಮಾಣ ಪತ್ರಕ್ಕಾಗಿ ಆಗ್ರಹಿಸಿದರು.
ಈ ಕಾರಣಕ್ಕೆ ಕಳೆದ ಜ.24 ರಂದು ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಬಳಿಕ ಎಚ್ಚತ್ತ ಅಂದಿನ ಪ್ರಭಾರ ತಹಶೀಲ್ದಾರ್ ಶಂಕರ್ ರಾವ್, ಬಿಇಒ ಚಂದ್ರಪಾಟೀಲ್, ಭೇಟಿ ನೀಡಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಮನವೊಲಿಸಿ, ಭರವಸೆ ನೀಡಿ 10 ದಿನದ ಕಾಲಾವಕಾಶ ಕೇಳಿಕೊಂಡಿದ್ದರು. ಅದರಂತೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿದ್ದರು. ಆದರೆ, ಭರವಸೆ ನೀಡಿ 20ಕ್ಕೂ ಹೆಚ್ಚುದಿನ ಕಳೆದರೂ ಪ್ರಮಾಣಪತ್ರ ಕೊಟ್ಟಿಲ್ಲ ಎಂದು ಆಕ್ರೋಶಗೊಂಡ ಮಕ್ಕಳು ಪುನಃ ಶಾಲೆಯಿಂದ ಹೊರಗುಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.