ಕೊಳ್ಳೇಗಾಲ(ಚಾಮರಾಜನಗರ): ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೊಳ್ಳೇಗಾಲ ಪೊಲೀಸರು ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಇದರಿಂದ ಅನ್ಯಾಯ ಹಾಗೂ ಅವಮಾನಕ್ಕೆ ಒಳಗಾಗಿರುವ ನಮ್ಮ ಕುಟುಂಬ ಅಪಮಾನ ಸಹಿಸದೇ ಮಾನಸಿಕವಾಗಿ ನೊಂದು ಜೀವ ತ್ಯಜಿಸುವ ಪರಿಸ್ಥಿತಿ ಉಂಟಾಗಿದೆ. ನಮ್ಮ ವಿರುದ್ಧ ದಾಖಲಿಸಿರುವ ಸುಳ್ಳು ದೂರನ್ನು ವಜಾಗೊಳಿಸಿ, ನಮ್ಮನ್ನು ಆರೋಪದಿಂದ ಮುಕ್ತಗೊಳಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚಿಲಕವಾಡಿ ಗ್ರಾಮ ಪಂಚಾಯತ್ ಪರಾಜಿತ ಅಭ್ಯರ್ಥಿ ಪ್ರದೀಪ್ ಅಲಿಯಾಸ್ ಮಲ್ಲೇಶ್ ಎಚ್ಚರಿಕೆ ನೀಡಿದ್ದಾರೆ.
ಕೊಳ್ಳೇಗಾಲ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರದೀಪ್, ಕಳೆದ 2020ರಲ್ಲಿ ನಡೆದ ಗ್ರಾಮ ಪಂಚಾಯ ಚುನಾವಣೆಯಲ್ಲಿ ಕುಂತೂರು ಗ್ರಾ.ಪಂ ವ್ಯಾಪ್ತಿಗೆ ಸೇರಿದ ಚಿಲಕವಾಡಿ ಗ್ರಾಮದ ವಾರ್ಡ್ 15ರ ಸಾಮಾನ್ಯ ಅಭ್ಯರ್ಥಿ ಸ್ಥಾನಕ್ಕೆ ಪರಿಶಿಷ್ಠ ಜಾತಿಯವನಾದ ನಾನು ಸ್ಪರ್ದಿಸಿದ್ದೆ. ಇದೇ ವಾರ್ಡ್ನಿಂದ ನಮ್ಮ ಗ್ರಾಮದ ಲಿಂಗಾಯತ ಸಮುದಾಯಕ್ಕೆ ಸೇರಿದ ಷಣ್ಮುಖಸ್ವಾಮಿ ಎಂಬುವರು ನನ್ನ ವಿರುದ್ಧ ಸ್ಪರ್ಧಿಸಿದ್ದರು.
ಈ ವೇಳೆ ಷಣ್ಮಖಸ್ವಾಮಿ ಹಾಗೂ ಆತನ ಮಗ ಸಂದೇಶ್ ನಮ್ಮ ವಿರುದ್ಧ ಸ್ಪರ್ದಿಸಬೇಡ. ಇದು ಸಾಮಾನ್ಯ ವಾರ್ಡ್, ಇಲ್ಲಿ ನಮ್ಮ ಜನಾಂಗದ ಅಭ್ಯರ್ಥಿಯೇ ಗೆಲ್ಲಬೇಕು. ನೀನು ನಾಮಪತ್ರ ವಾಪಸ್ ತೆಗೆದುಕೋ, ಮುಂದೆ ನಿನಗೆ ತೊಂದರೆ ಉಂಟಾದರೆ ನಾವು ಜವಬ್ದಾರರಲ್ಲ ಎಂದು ಬೆದರಿಕೆ ಹಾಕಿದ್ದರು. ಅದನ್ನು ಲೆಕ್ಕಿಸದೇ ನಾನು ಚುನಾವಣೆಯಲ್ಲಿ ಸ್ಪರ್ಧೆ ಮುಂದುವರೆಸಿದ್ದೆ. ಡಿ. 27ರ ಮತದಾನದ ದಿನ ತಂದೆ-ಮಗ ಇಬ್ಬರು ಪ್ರದೀಪ್ ನಿನ್ನನ್ನು ಗೆದ್ದರು ಬಿಡುವುದಿಲ್ಲ, ಸೋತರೂ ಬಿಡುವುದಿಲ್ಲ ಎಂದು ಹೆದರಿಸಿದ್ದರು. ಬಳಿಕ ನಾನು ಚುನಾವಣೆಯಲ್ಲಿ ಸೋತಿದ್ದೆ.