ಚಾಮರಾಜನಗರ:ಶತಮಾನಗಳ ಪರಂಪರೆ, ಜಾತಿ-ಭೇದದ ಹಂಗಿಲ್ಲದೆ ಸೌಹಾರ್ದ ಬೆಸೆಯುವ ಚಿಕ್ಕಲ್ಲೂರು ಜಾತ್ರೆ ಪ್ರಾರಂಭವಾಗಿದ್ದು, ಶುಕ್ರವಾರ 10.45ರ ಸುಮಾರಿಗೆ ಚಂದ್ರಮಂಡಲ ಪೂಜೆ ನೆರವೇರಿದೆ. ಈ ಬಾರಿ ಉತ್ತರ ದಿಕ್ಕಿಗೆ ಉತ್ತಮ ಮಳೆ ಬೆಳೆಯಾಗುವ ಭವಿಷ್ಯ ಬಂದಿದೆ.
ಚಿಕ್ಕಲ್ಲೂರಿನಲ್ಲಿ ಚಂದ್ರಮಂಡಲ ಪೂಜೆ... ಉತ್ತರದತ್ತ ಈ ಬಾರಿ ಮಳೆ-ಬೆಳೆ ಸಮೃದ್ಧಿ ಚಂದ್ರಮಂಡಲವೆಂದರೆ ಬಿದಿರಿನಿಂದ ಚಂದ್ರನಾಕೃತಿ ಪಂಜು ಮಾಡಿ ಮಠಾಧೀಪತಿ ಜ್ಯೋತಿ ಬೆಳಗಿಸುತ್ತಾರೆ. ಚಂದ್ರಮಂಡಲ ಧಗಧಗನೆ ಉರಿಯುವಾಗ ಯಾವ ಕಡೆ ಹೆಚ್ಚು ವಾಲುತ್ತದೆಯೋ ಆ ಭಾಗಕ್ಕೆ ಹೆಚ್ಚು ಮಳೆ ಬೀಳುತ್ತದೆ. ಜೊತೆಗೆ ರೈತರು ಬೆಳೆಯುವ ಫಸಲು ಉತ್ತಮವಾಗಿ ಬರುತ್ತದೆ. ಅಲ್ಲದೆ, ಆ ಪ್ರದೇಶ ಸಮೃದ್ಧಿ ಹೊಂದುತ್ತದೆ ಎಂಬುದು ಸಿದ್ದಪ್ಪಾಜಿಯ ಭಕ್ತರ ನಂಬಿಕೆಯಾಗಿದೆ. ಅದರಂತೆ ಈ ಬಾರಿ ಉತ್ತರದತ್ತ ದೀಪ ಹೊತ್ತಿ ಉರಿದಿದೆ.
ಚಂದ್ರಮಂಡಲೋತ್ಸವನ್ನು ನೋಡಲು ಜಿಲ್ಲೆ ಸೇರಿದಂತೆ ರಾಜ್ಯದ ಮೈಸೂರು, ಮಳವಳ್ಳಿ, ಮಂಡ್ಯ, ಮದ್ದೂರು, ರಾಮನಗರ, ಕನಕಪುರ, ಬೆಂಗಳೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ಲಕ್ಷಾಂತರ ಜನರು ಆಗಮಿಸಿ ಧಗಧಗನೆ ಉರಿಯುವ ಜ್ಯೋತಿಯನ್ನು ಕಣ್ತುಂಬಿಕೊಂಡರು.
ನೆರೆದಿದ್ದ ಭಕ್ತ ಸಮೂಹ ಚಂದ್ರಮಂಡಲಕ್ಕೆ ಹಣ್ಣು, ಜವನ, ಹೂವು, ಕಾಸು ಸೇರಿದಂತೆ ದವಸ ಧಾನ್ಯಗಳಾದ ಎಳ್ಳು, ರಾಗಿ, ಭತ್ತ, ಜೋಳದ ಕಾಳುಗಳನ್ನು ಜ್ಯೋತಿಯಂತೆ ಬೆಳಗುವ ಚಂದ್ರಮಂಡಲಕ್ಕೆ ಎಸೆದು ತಮ್ಮ ಹರಕೆ ತೀರಿಸಿದರು.
ಅಲ್ಲದೆ, ಚಂದ್ರಮಂಡಲದ ಜ್ಯೋತಿ ಧಗಧಗನೆ ಉರಿಯುವಾಗ ನೆರೆದಿದ್ದ ಲಕ್ಷಾಂತರ ಜನರು ಧರೆಗೆ ದೊಡ್ಡವರ ಮಂಟೇಸ್ವಾಮಿ ಪಾದಕ್ಕೆ ಉಘೇ, ಘನನೀಲಿ ಸಿದ್ದಪ್ಪಾಜಿ ಪಾದಕ್ಕೆ ಉಘೇ ಉಘೇ ಎಂದು ಘೋಷಣೆ ಹಾಕುತ್ತಾ ಭಕ್ತಿರಸದಲ್ಲಿ ಮಿಂದೆದ್ದರು.