ಚಾಮರಾಜನಗರ: ನೀತಿ ಆಯೋಗವು ಬಹು ಆಯಾಮದ ಬಡತನ ಸೂಚ್ಯಂಕದ ವರದಿಯನ್ನು ಪ್ರಕಟಿಸಿದೆ. ಬಡತನದಲ್ಲಿ ರಾಜ್ಯದಲ್ಲಿ ಚಾಮರಾಜನಗರ 10ನೇ(18.91%) ಸ್ಥಾನವನ್ನು ಪಡೆದಿದೆ. ಹಳೇ ಮೈಸೂರು ಭಾಗದಲ್ಲಿ ಗಡಿಜಿಲ್ಲೆ ಹೆಚ್ಚು ಹಿಂದುಳಿದಿರುವುದಾಗಿದೆ.
ಚಾಮರಾಜನಗರ ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ.18.91 ರಷ್ಟು ಜನಸಂಖ್ಯೆ ಬಹು ಆಯಾಮದ ಬಡತನ ಹೊಂದಿದ್ದು, ಟಾಪ್ ಹತ್ತು ಜಿಲ್ಲೆಗಳ ಪೈಕಿ ಹಳೇ ಮೈಸೂರು ಭಾಗದ ಚಾಮರಾಜನಗರ ಒಂದಾಗಿದೆ. ನೆರೆ ಜಿಲ್ಲೆಗಳಾದ ಮೈಸೂರಿನಲ್ಲಿ ಶೇ.7.79, ಮಂಡ್ಯದಲ್ಲಿ ಶೇ.6.62, ಕೊಡಗಿನಲ್ಲಿ ಶೇ. 8.74, ರಾಮನಗರದಲ್ಲಿ ಶೇ. 8.77ರಷ್ಟು ಬಡತನ ಇದ್ದು ಚಾಮರಾಜನಗರಕ್ಕಿಂತ ಸಂಪದ್ಭರಿತ ಎನಿಸಿಕೊಂಡಿವೆ.
ದೀಪದ ಕೆಳಗೆ ಕತ್ತಲು ಎಂಬಂತೆ ಸುತ್ತಮುತ್ತಲಿನ ಹತ್ತಾರು ಜಿಲ್ಲೆಗಳು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದರೂ ಚಾಮರಾಜನಗರ ಮಾತ್ರ ಅಭಿವೃದ್ಧಿಯಲ್ಲಿ ಅಂಬೆಗಾಲಿಡುತ್ತಿದೆ. ಶಿಕ್ಷಣದಲ್ಲಿ ಜಿಲ್ಲೆ ಮುಂದುವರೆಯುತ್ತಿದ್ದರೂ ಉದ್ಯೋಗ ಸೃಷ್ಟಿಯಲ್ಲಿ ಜಿಲ್ಲೆ ಹಿಂದೆ ಬಿದ್ದಿದೆ. ಪ್ರವಾಸೋದ್ಯಮ ಅಭಿವೃದ್ಧಿ, ರೈಲ್ವೆ ಸಂಪರ್ಕ, ಕೈಗಾರಿಕೆ ಸ್ಥಾಪನೆಯಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿದೆ ಎನ್ನಲಾಗ್ತಿದೆ. ಹಾಗಾಗಿ ಜಿಲ್ಲೆ ಬಡತನದಲ್ಲಿ ಮುಂದುವರಿಯಲು ಕಾರಣವಾಗಿದೆ.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಹೆಚ್ಚುತ್ತಿವೆ ಮಹಿಳೆಯರು, ಯುವತಿಯರ ನಾಪತ್ತೆ ಪ್ರಕರಣಗಳು
ನೀತಿ ಆಯೋಗ ಪ್ರಕಟಿಸಿರುವ ಈ ಸೂಚ್ಯಂಕವನ್ನು ಆಕ್ಸ್‌ಫರ್ಡ್ ವಿವಿಯ ಮಾನವ ಅಭಿವೃದ್ಧಿ ಮತ್ತು ಬಡತನ ಉಪಕ್ರಮ, ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯ ಮಾನದಂಡದಡಿ ಸಿದ್ಧಪಡಿಸಲಾಗಿದ್ದು ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಮಾನದಂಡದ ಆಧಾರದಲ್ಲಿ ಬಡತನವನ್ನು ಅಳೆಯಲಾಗಿದೆ.