ಚಾಮರಾಜನಗರ: ಪುಸ್ತಕದ ಬದನೆಕಾಯಿ, ಕೃತಿಯೇ ಬೇರೆ - ಕಾರ್ಯವೇ ಬೇರೆ ಎಂಬ ಮಾತುಗಳಿಗೆ ಅಪವಾದದಂತೆ ಪುಸ್ತಕಗಳನ್ನು ಓದಿ ಸಮಗ್ರ ಕೃಷಿಯ ಪ್ರೇರೇಪಣೆ ಪಡೆದು ದಿನಕ್ಕೆ ಒಂದೂವರೆ ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ ಈ ಮಹಿಳೆ.
ಹೌದು, ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದ ಪ್ರಭಾಮಣಿ ಎಂಬವರು ತನ್ನ ತಮ್ಮ ನೀಡಿದ ಸಮಗ್ರ ಕೃಷಿ, ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳಕ್ಕೆ ಸಂಬಂಧಿಸಿದ ಹತ್ತಾರು ಪುಸ್ತಕಗಳನ್ನು ಓದಿ ಪತಿ ಪ್ರಕಾಶ್ ಅವರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸೈ ಎನಿಸುವಷ್ಟರ ಮಟ್ಟಿಗೆ ಆದಾಯದ ಮೂಲ ಕಂಡುಕೊಂಡಿದ್ದಾರೆ.
5 ಎಕರೆ ಜಮೀನಿನ 10 ಗುಂಟೆ ಜಾಗದಲ್ಲಿ 5 ಬಗೆಯ ತರಕಾರಿ, ಸೊಪ್ಪುಗಳನ್ನು ಬೆಳೆಯುತ್ತಿದ್ದು, ವಿವಿಧ ಅವಧಿಯಲ್ಲಿ ಫಸಲು ಕೈ ಸೇರುವುದರಿಂದ ನಿತ್ಯ 1500 ರೂ. ಆದಾಯ ಗಳಿಸುತ್ತಾರೆ. ಇದರೊಟ್ಟಿಗೆ, ವಾಣಿಜ್ಯ ಬೆಳೆಗಳಾದ ಅರಿಶಿಣ, ಬಾಳೆ, ಕೋಸು ಹಾಗೂ ಕಬ್ಬು ಬೆಳೆಯುತ್ತಿದ್ದು, ಸಮಗ್ರ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ.
ಕೂಲಿ ಮಾಡುತ್ತಿದ್ದ ದಂಪತಿ:
ರಾಸಾಯನಿಕ ಗೊಬ್ಬರ, 5 ಎಕರೆಗೆ ಒಂದೇ ಬೆಳೆ ಬೆಳೆದು ಕೈ ಸುಟ್ಟುಕೊಂಡು 5 ವರ್ಷಗಳ ಕಾಲ ಗುತ್ತಿಗೆ ಕೊಟ್ಟು ಪ್ರಕಾಶ್ ದಿನಗೂಲಿಗೆ ಹಾಗೂ ಪ್ರಭಾಮಣಿ ತಿಂಗಳಿಗೆ 6 ಸಾವಿರ ರೂ. ಸಿಗುವ ನೌಕರಿ ಹಿಡಿದಿದ್ದರು. ಗುತ್ತಿಗೆ ಅವಧಿ ಮುಗಿಯುವ ವೇಳೆ ಪ್ರಭಾಮಣಿ ಅವರ ತಮ್ಮ ಕೃಷಿಗೆ ಸಂಬಂಧಿಸಿದ ಪುಸ್ತಕಗಳು, ಯೂಟ್ಯೂಬ್ ಲಿಂಕ್ಗಳನ್ನು ಕಳುಹಿಸುತ್ತಿದ್ದಾಗ ಪ್ರೇರಣೆಗೊಂಡು, ಪತಿಯನ್ನು ಕೃಷಿ ಮಾಡಲು ಒಪ್ಪಿಸಿ ಸಮಗ್ರ ಕೃಷಿ ಆರಂಭಿಸಿದರು. ಆರಂಭದಲ್ಲಿ ಒಂದೂವರೆ ವರ್ಷ ಕಷ್ಟವಾದರೂ ಈಗ ಕೈತುಂಬಾ ದುಡಿಯುತ್ತಿದ್ದಾರೆ.