ಚಾಮರಾಜನಗರ: ದಶಕಗಳಿಂದ ಸೇತುವೆ ಇಲ್ಲದೇ ಹೆಣ ಹೊರುವವರು ನರಕ ಅನುಭವಿಸುತ್ತಿದ್ದ ಯಳಂದೂರು ತಾಲೂಕಿನ ಮಾಂಬಳ್ಳಿಯ ಸೇತುವೆ ಸಮಸ್ಯೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದ ಈಟಿವಿ ಭಾರತ ವರದಿ; ಮಾಂಬಳ್ಳಿ ಸೇತುವೆ ಕಾಮಗಾರಿ ನಾಳೆಯಿಂದ ಶುರು - mamballli bridge latest news
ದಶಕಗಳಿಂದ ಸೇತುವೆ ಇಲ್ಲದೇ ಹೆಣ ಹೊರುವವರು ನರಕ ಅನುಭವಿಸುತ್ತಿದ್ದ ಯಳಂದೂರು ತಾಲೂಕಿನ ಮಾಂಬಳ್ಳಿಯ ಸೇತುವೆ ಕಾಮಗಾರಿಗೆ ಕೊನೆಗೂ ಜಿಲ್ಲಾಡಳಿತ ಅಸ್ತು ಎಂದಿದ್ದು, ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
ಮಾಂಬಳ್ಳಿ ಗ್ರಾಮದ ಸ್ಮಶಾನ ಹಾಗೂ ಹಾದು ಹೋಗುವ ಮಾರ್ಗದ ತೊಂದರೆ ಪರಿಹರಿಸಲು ಇಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳ ಸಭೆ ನಡೆಸಿ, ಶಾಶ್ವತವಾಗಿ 2.4 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಿಸುವ ಕಾಮಗಾರಿಯನ್ನು ಗುರುವಾರದಿಂದಲೇ ಆರಂಭಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದ್ದಾರೆ. ಅಲ್ಲದೆ, ಸುವರ್ಣಾವತಿ ನದಿ ದಾಟಿ ಹೋಗಲು ನಿರ್ಮಿಸುವ ಶಾಶ್ವತ ಸೇತುವೆ ಪಕ್ಕದಲ್ಲೇ ಜನರಿಗೆ ತೊಂದರೆಯಾಗದಂತೆ ತೆರಳಲು 10 ದಿನದೊಳಗೆ ತಾತ್ಕಾಲಿಕ ಸೇತುವೆ ಕಟ್ಟಲು ನಿಗಮದ ಎಂಜಿನಿಯರ್ಗೆ ಖಡಕ್ ನಿರ್ದೇಶನ ನೀಡಿದ್ದಾರೆ. ಸ್ಮಶಾನಕ್ಕೆ ಸಂಬಂಧಿಸಿದಂತೆ ಸರ್ವೇ ನಂ: 887 ಮತ್ತು 881/1ರ ಜಮೀನು ಕುರಿತು ಉಚ್ಛ ನ್ಯಾಯಾಲಯ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ ಸರ್ಕಾರಿ ವಕೀಲರನ್ನು ಭೇಟಿ ಮಾಡಿ ಕಡತಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಕ್ರಮವಹಿಸುವಂತೆ ಎಸಿ ಹಾಗೂ ತಹಸಿಲ್ದಾರ್ಗೆ ಡಿಸಿಯವರು ಸೂಚಿಸಿದ್ದಾರೆ.
ಕಳೆದ 24 ರಂದು ಹೆಣ ಹೊರುವವರಿಗೆ ನರಕ ದರ್ಶನ... ದಶಕಗಳ ಮಾಂಬಳ್ಳಿ ಸಮಸ್ಯೆಗೆ ಇನ್ನೂ ಸಿಗದ ಮುಕ್ತಿ..! ಶೀರ್ಷಿಕೆಯಲ್ಲಿ ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಈ ವರದಿ, ಜಿಲ್ಲಾಡಳಿತದ ಗಮನ ಸೆಳೆಯುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಶಾಶ್ವತ ಸೇತುವೆಗೆ ನೆಟ್ಟಿಗರು ಆಗ್ರಹಿಸಿದ್ದರು.