ಚಾಮರಾಜನಗರ: ದೇಶಾದ್ಯಂತ ನಡೆಯುತ್ತಿರುವ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನದ ಭಾಗವಾಗಿ ಚಾಮರಾಜನಗರ ಜಿಲ್ಲೆಯ 6 ಕಡೆ ಕೊರೊನಾ ಯೋಧರಿಗೆ ಚುಚ್ಚುಮದ್ದು ನೀಡುವ ಪ್ರಕ್ರಿಯೆ ಇಂದು ಆರಂಭಗೊಂಡಿದೆ.
ಕೊರೊನಾ ಯೋಧರಿಗೆ ಕೋವಿಡ್ ಲಸಿಕೆ ಮೊದಲ ಹಂತದ 814 ಮಂದಿಯಲ್ಲಿ ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ 100 ಮಂದಿಗೆ ಕೋವ್ಯಾಕ್ಸಿನ್ ಉಳಿದಂತೆ ಕೊಳ್ಳೇಗಾಲ ತಾಲೂಕು ಆಸ್ಪತ್ರೆ, ಯಳಂದೂರು ತಾಲೂಕು ಆಸ್ಪತ್ರೆ, ಗುಂಡ್ಲುಪೇಟೆ ತಾಲೂಕು ಆಸ್ಪತ್ರೆ, ಕೊಳ್ಳೇಗಾಲ ನಗರ ಆರೋಗ್ಯ ಕೇಂದ್ರ ಹಾಗೂ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಮೊದಲ ಲಸಿಕೆಯನ್ನು ಆರೋಗ್ಯ ಇಲಾಖೆ ಡಿ ಗ್ರೂಪ್ ನೌಕರ ಮಂಜು ಎಂಬಾತನಿಗೆ ನೀಡಲಾಯಿತು. ಬಳಿಕ, ಸಿಮ್ಸ್ ಡೀನ್ ಡಾ.ಸಂಜೀವ್ ರೆಡ್ಡಿ ಅವರಿಗೆ ಲಸಿಕೆ ನೀಡಲಾಯಿತು. ಇಂದು ಮೆಡಿಕಲ್ ಕಾಲೇಜಿನಲ್ಲಿ 100 ಮಂದಿಗೆ ಲಸಿಕೆ ಕೊಡಲು ಯೋಜಿಸಲಾಗಿದೆ. ಮೊದಲ ಲಸಿಕೆ ಪಡೆದ ಮಂಜುನಾಥ್ ಮಾತನಾಡಿ, ಲಸಿಕೆ ಪಡೆದ ಬಳಿಕ ಸಾಮಾನ್ಯವಾಗಿದ್ದೇನೆ, ಚುಚ್ಚುಮದ್ದು ಪಡೆಯಲು ಯಾರೂ ಹೆದರಬಾರದು. ನಾನೇ ಮೊದಲು ಲಸಿಕೆ ಪಡೆದದ್ದು ಬಹಳಷ್ಟು ಖುಷಿಯಾಗಿದೆ. ಕೊರೊನಾ ಹೋರಾಟದ ಅಂತಿಮ ಘಟ್ಟಕ್ಕೆ ತಲುಪಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ರು. ಜಿಲ್ಲೆಯಲ್ಲಿ ಒಂದು ವೇನ್ ಕೋವ್ಯಾಕ್ಸಿನ್ ಅನ್ನು 20 ಮಂದಿಗೆ, ಕೋವಿಶೀಲ್ಡ್ ಅನ್ನು 10 ಮಂದಿಗೆ ನೀಡಲಾಗುತ್ತಿದೆ.