ಕೊಳ್ಳೇಗಾಲ(ಚಾಮರಾಜನಗರ): ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿದ್ದ ಚಾಮರಾಜನಗರ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಬಂದಿದ್ದಾರೆ.
ಹನೂರು ತಾಲೂಕಿನ ಒಡೆಯರ ಪಾಳ್ಯದ ಸಿದ್ದೇಶ್ ತವರಿಗೆ ಬಂದಿಳಿದಿದ್ದು, ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ದ್ವಿತೀಯ ವರ್ಷದ ಮೆಡಿಕಲ್ ಓದುತ್ತಿದ್ದ ಸಿದ್ದೇಶ್ ಉಕ್ರೇನ್ನ ಕೀವ್ ನಗರದಲ್ಲಿ ವಾಸವಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳಿಂದ ನಡೆಯುತ್ತಿರುವ ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧದಿಂದ ಆತಂಕಕ್ಕೀಡಾಗಿದ್ದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸಲು ಪ್ರಾರಂಭವಾದಂತೆ ನಮ್ಮಲ್ಲಿ ಹೆಚ್ಚಿನ ಆತಂಕ ಮನೆ ಮಾಡಿತ್ತು. ನಾವಿದ್ದ ಸ್ಥಳದಲ್ಲಿ ನಾವು ಸೇಫ್ ಆಗಿದ್ದೆವು. ಆದರೆ, ನಾವಿದ್ದ ಸ್ಥಳಕ್ಕಿಂತ ಕಾರ್ಖೀವ್ ನಲ್ಲಿದ್ದವರು ಬಹಳ ತೊಂದರೆ ಅನುಭವಿಸಿದ್ದಾರೆ ಎಂದು ತಿಳಿಸಿದರು.
ಚಾಮರಾಜನಗರದ ಇಬ್ಬರು ವಿದ್ಯಾರ್ಥಿಗಳು ತಿನ್ನಲು ಬೇಕಾದ ಆಹಾರವನ್ನು ಸ್ವತಃ ನಾವೇ ತಯಾರಿಸಿಕೊಳ್ಳುತ್ತಿದ್ದೆವು. ನಮ್ಮ ಸ್ನೇಹಿತರು ಬಹಳಷ್ಟು ಇನ್ನೂ ಜನರು ಅಲ್ಲಿಯೇ ಇದ್ದಾರೆ. ಕೀವ್ಯಿಂದ ಹಂಗೇರಿಯ ಬುಡಾಪೆಸ್ಟ್ ಗೆ ಬಂದು ಆನಂತರ ನಮ್ಮ ದೇಶದ ಕಡೆಗೆ ರೈಲು, ಟ್ಯಾಕ್ಸಿ, ಬಸ್, ವಿಮಾನ ಮೂಲಕ ಬಂದಿದ್ದೇನೆ. ನಮ್ಮನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತಂದ ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ:ಉಕ್ರೇನ್ನಿಂದ ಜೀವಂತ ಇದ್ದವರನ್ನು ತರುವುದೇ ಕಷ್ಟ.. ಶವ ತರುವುದು ಇನ್ನೂ ಕಠಿಣ: ಶಾಸಕ ಬೆಲ್ಲದ
ಮತ್ತೋರ್ವ ವಿದ್ಯಾರ್ಥಿನಿ, ಹನೂರಿನ ಸ್ವಾತಿ ಕೂಡ ರಾಜ್ಯಕ್ಕೆ ಬಂದಿಳಿದಿದ್ದಾರೆ. ಉಕ್ರೇನ್ನ ಕೀವ್ ನಗರದಲ್ಲಿ ತಾರಸ್ ಶೆವ್ಚೆಂಕೋ ರಾಷ್ಟ್ರೀಯ ವಿವಿಯಲ್ಲಿ ಐದನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಸ್ವಾತಿ ಇಂದು ಮಧ್ಯಾಹ್ನ ಬೆಂಗಳೂರಿಗೆ ಬಂದಿದ್ದಾರೆ. ಉಕ್ರೇನ್ನಿಂದ ಹಂಗೇರಿ ಗಡಿಗೆ ತೆರಳಿ ಅಲ್ಲಿಂದ ಬುಡಾಪೆಸ್ಟ್ ಬಳಿಕ ದೆಹಲಿಗೆ ಬಂದಿದ್ದರು. ಈಗ ಬೆಂಗಳೂರಿಗೆ ತಲುಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸ್ವಾತಿ ಹನೂರಿನ ಪತ್ರಕರ್ತ ರವಿ ಎಂಬುವರ ಮಗಳಾಗಿದ್ದಾರೆ. ಭೂಮಿಕಾ ಮತ್ತು ಕಾವ್ಯಾ ಮತ್ತಿಬ್ಬರು ವಿದ್ಯಾರ್ಥಿನಿಯರು ರಾಯಭಾರ ಕಚೇರಿ ಸಂಪರ್ಕದಲ್ಲಿದ್ದು, ಆದಷ್ಟು ಶೀಘ್ರ ತಾಯ್ನಾಡಿಗೆ ಸೇರಿಕೊಳ್ಳುವ ಭರವಸೆ ವ್ಯಕ್ತವಾಗಿದೆ.