ಚಾಮರಾಜನಗರ:ಸಂಗೀತ ಮತ್ತು ನೃತ್ಯ ಅಕಾಡೆಮಿ ನೀಡುವ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಚಾಮರಾಜನಗರದ ರಾಮಸಮುದ್ರ ಬಡಾವಣೆ ನಿವಾಸಿ, ನಾದಸ್ವರ ಕಲಾವಿದ ಆರ್.ರಂಗಸ್ವಾಮಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸಂಗೀತ ವಿಭಾಗದಲ್ಲಿ ರಂಗಸ್ವಾಮಿ ಅವರಿಗೆ ಪ್ರಶಸ್ತಿ ಪ್ರಕಟವಾಗಿದ್ದು, 25 ಸಾವಿರ ಗೌರವ ಧನ, ಪ್ರಶಸ್ತಿ ಪತ್ರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ತಿಂಗಳಾಂತ್ಯ ಇಲ್ಲವೇ ಅಕ್ಟೋಬರ್ನಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ರಂಗಸ್ವಾಮಿ ಅವರಿಗೀಗ 56 ವರ್ಷವಾಗಿದ್ದು, ಅವರ ತಾತನ ಕಾಲದಿಂದಲೂ ಈ ಕುಟುಂಬ ನಾದಸ್ವರ ನಂಬಿಕೊಂಡಿಯೇ ಜೀವನ ಸಾಗಿಸುತ್ತಿದ್ದಾರೆ. ಈಗ ರಂಗಸ್ವಾಮಿ ಅವರ ಮಗ ಶ್ರೀಧರ್ ಅವರು ಕೂಡ ನಾದಸ್ವರ ಕಲಾವಿದರಾಗಿ ಹಲವು ಕಚೇರಿಗಳನ್ನು ನಡೆಸಿದ್ದಾರೆ.
ಚಾಮರಾಜನಗರದ ನಾದಸ್ವರ ಕಲಾವಿದನಿಗೆ ಪ್ರತಿಷ್ಠಿತ ಕಲಾಶ್ರೀ ಪ್ರಶಸ್ತಿ ರಂಗಸ್ವಾಮಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ತನ್ನ 16 ನೇ ವಯಸ್ಸಿನಲ್ಲೇ ನಾದಸ್ವರ ಕಲಿತೆ, ತಂದೆಯೇ ಮೊದಲ ಗುರುವಾಗಿದ್ದು ಬಳಿಕ ತಮಿಳುನಾಡಿನ ಕುಂಜಪ್ಪ ಹಾಗೂ ಮೈಸೂರಿನ ಆಸ್ಥಾನ ವಿದ್ವಾನರಾದ ಎನ್.ನಾಗರಾಜು ಅವರ ಬಳಿ ವಿದ್ಯೆ ಕಲಿತೆ, ಆಕಾಶವಾಣಿಯ ಎ ಗ್ರೇಡ್ ಕಲಾವಿದನಾಗಿದ್ದು, ಚಂದನ ವಾಹಿಣಿ ಮತ್ತು ಟಿಟಿಡಿ ವಾಹಿಣಿಗಳಲ್ಲಿ ಕಛೇರಿ ನಡೆಸಿದ್ದೇನೆ ಎಂದು ತಿಳಿಸಿದರು.
ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಖುಷಿ ತಂದಿದ್ದು, ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇನೆ ಎಂದು ಪ್ರಶಸ್ತಿ ಬಂದ ಸಂತಸ ಹಂಚಿಕೊಂಡರು.