ಚಾಮರಾಜನಗರ: ಜಿಲ್ಲೆಯಲ್ಲಿ ಮೈಸೂರು ಮಹರಾಜರಿಂದ ಸ್ಥಾಪಿಸಲ್ಪಟ್ಟ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಮೈಸೂರು ಯದುವಂಶಸ್ಥರನ್ನು ಬಿಟ್ಟರೆ, ರಾಜ್ಯದ ಸಿಎಂಗಷ್ಟೇ ‘ಇಸ್ತಕಪಾಲ್ ಮರ್ಯಾದೆ’ ಎಂಬ ವಿಶೇಷ ಗೌರವ ಕೊಡುವ ಸಂಪ್ರದಾಯವಿದೆ. ಈ ಗೌರವಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಪಾತ್ರರಾಗಿದ್ದು, ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ದೇಗುಲಕ್ಕೆ ಭೇಟಿ ನೀಡಿದ್ದರು.
‘ರುದ್ರ ಪಾದ’ದ ಆಶೀರ್ವಾದ ಮಹಾರಾಜರು ಮತ್ತು ನಾಡಿನ ಮುಖ್ಯಮಂತ್ರಿಗಷ್ಟೇ ಸಿಗೋದು ಈ ದೇಗುಲದ ವೈಶಿಷ್ಟ್ಯತೆ. ಈ ರುದ್ರಪಾದ ದರ್ಶನದಿಂದಾಗಿ ಅಧಿಕಾರ ಪ್ರಾಪ್ತಿ, ಇಷ್ಟಾರ್ಥ ಸಿದ್ಧಿ, ಆರೋಗ್ಯ ವೃದ್ಧಿಯಾಗುತ್ತೆ ಎಂಬ ನಂಬಿಕೆಯೂ ಇದೆ. ದೇಶ ಪ್ರಜಾಪ್ರಭುತ್ವಗೊಂಡ ಬಳಿಕ ಮಹಾರಾಜರಿಗೆ ಸೀಮಿತವಾಗಿದ್ದ ಗೌರವ ರಾಜ್ಯದ ಮುಖ್ಯಮಂತ್ರಿಗೂ ಲಭಿಸಿತು.
ಅಧಿಕಾರ ಕೈತಪ್ಪುವ ಭಯಕ್ಕೆ ಜಿಲ್ಲೆಗೆ ಕಾಲಿಡದ ಸಿಎಂಗಳು ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆಯೂ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ದೇವಾಲಯದ ಇಸ್ತಕಪಾಲ್ ಮರ್ಯಾದೆ ಪಡೆಯಲಾಗದೆ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ವಾಪಸ್ಸಾಗಿದ್ದರು. ಇದಾದ ಬಳಿಕ ಸಿದ್ದರಾಮಯ್ಯ ಭೇಟಿ ನೀಡಿ ಈ ಗೌರವ ಪಡೆದಿದ್ದರು. ಇದ್ರ ಜೊತೆಗೆ 5 ವರ್ಷಗಳ ಕಾಲ ಅಧಿಕಾರ ಪೂರೈಸಿ ಜಿಲ್ಲೆಯ ಬಗೆಗಿದ್ದ ಮೂಢನಂಬಿಕೆಯನ್ನು ಸುಳ್ಳಾಗಿಸಿದ್ದರು.
ಯದುವಂಶದ ಪಟ್ಟಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಯದುವೀರ್ ಕೃಷ್ಣದತ್ತ ಒಡೆಯರ್ ಇಲ್ಲಿಗೆ ಭೇಟಿ ನೀಡಿದ್ದ ವೇಳೆಯೂ ಅವರಿಗೆ ಇಸ್ತಕಪಾಲ್ ಮರ್ಯಾದೆ ನೀಡಲಾಗಿತ್ತು. ಅಲ್ಲದೆ ಈ ದೇವಾಲಯ ನಿರ್ಮಿಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೂರ್ತಿಗೆ ಇಂದಿಗೂ ಕೂಡ ನಿತ್ಯ ರುದ್ರಪಾದದಿಂದ ಆಶೀರ್ವಾದ ನೀಡಲಾಗುತ್ತಿದೆ. ಯದುವಂಶ ಶ್ರೇಯೋಭಿವೃದ್ಧಿಯಾಗಲೆಂದು ಪ್ರಾರ್ಥಿಸಲಾಗುತ್ತದೆ.
ಚಾಮರಾಜನಗರಕ್ಕೆ ಬಾರದ ಮುಖ್ಯಮಂತ್ರಿಗಳು
ಚಾಮರಾಜನಗರಕ್ಕೆ ಸಿಎಂ ಆದವರು ಬಂದರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ಮೌಢ್ಯವನ್ನು ಸಿದ್ದರಾಮಯ್ಯ ತೊಡೆದು ಹಾಕಿದರೂ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೌಢ್ಯಕ್ಕೆ ಜೋತು ಬಿದ್ದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ವೀರೇಂದ್ರ ಪಾಟೀಲರ ನಂತರ ಅಧಿಕಾರಕ್ಕೆ ಬಂದ ಸಮಾಜವಾದಿ ಹಿನ್ನಲೆಯ ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಹೆಚ್.ಡಿ ದೇವೇಗೌಡ, ಸಮಾಜವಾದಿ ಜೆ.ಹೆಚ್.ಪಟೇಲ್, ಎಸ್.ಎಂ ಕೃಷ್ಣ, ಧರಂ ಸಿಂಗ್ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬರಲೇ ಇಲ್ಲ. ಜಿಲ್ಲೆಯ ಗಡಿಯಲ್ಲೇ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸಂಪ್ರದಾಯ ಆರಂಭಿಸಿದರು. ಆದರೆ, 16 ವರ್ಷದ ನಂತರ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದ ವೇಳೆ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರು.
ಜಿಲ್ಲೆಗೆ ಆಗಮಿಸಿದ್ದ ಜಗದೀಶ್ ಶೆಟ್ಟರ್
ಕಾಕತಾಳೀಯ ಎನ್ನುವಂತೆ ಅಧಿಕಾರ ಹಸ್ತಾಂತರದ ಗೊಂದಲದಿಂದ ಸರ್ಕಾರವೇ ಪತನಗೊಂಡು, ಚಾಮರಾಜನಗರ ಭೇಟಿ ವಿಷಯ ಮತ್ತಷ್ಟು ಪ್ರಚಲಿತವಾಯಿತು. ಮೈತ್ರಿ ಸರ್ಕಾರ ಪತನದ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ ಮೂರೂವರೆ ವರ್ಷದ ಅಧಿಕಾರಾವಧಿಯಲ್ಲಿ ಒಮ್ಮೆಯೂ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ.
ಯಡಿಯೂರಪ್ಪ ನಂತರ ಮುಖ್ಯಮಂತ್ರಿ ಆದ ಡಿ.ವಿ ಸದಾನಂದಗೌಡ ಕೂಡ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಆದರೆ ನಂತರ ಮುಖ್ಯಮಂತ್ರಿಯಾದ ಜಗದೀಶ್ ಶೆಟ್ಟರ್ ಅಧಿಕಾರಾವಧಿಯ ಕಡೆಯ ದಿನಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಆದರೆ ಅವಧಿ ಮುಗಿದು ಚುನಾವಣೆ ನಡೆದ ಕಾರಣಕ್ಕೆ ಅದರ ಬಗ್ಗೆ ಅಷ್ಟು ಚರ್ಚೆ ಆಗಲಿಲ್ಲ.
ಆದರೆ, ಎಲ್ಲಾ ಮೌಢ್ಯವನ್ನು ಬದಿಗೊತ್ತಿದ್ದ ಸಿದ್ದರಾಮಯ್ಯ 11ಕ್ಕೂ ಹೆಚ್ಚು ಬಾರಿ ಜಿಲ್ಲಾಕೇಂದ್ರಕ್ಕೆ ಭೇಟಿ ನೀಡಿದರು. ಅಧಿಕಾರಾವಧಿಯನ್ನೂ ಪೂರ್ಣಗೊಳಿಸಿ ಚಾಮರಾಜನಗರಕ್ಕೆ ಅಂಟಿದ್ದ ಕಳಂಕವನ್ನು ದೂರಮಾಡಿದರು. ಆದರೂ ನಂತರ ಮುಖ್ಯಮಂತ್ರಿ ಆದ ಕುಮಾರಸ್ವಾಮಿ, ಈಗಿನ ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ.