ಚಾಮರಾಜನಗರ :ಆಷಾಢ ಮಾಸದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ರಥೋತ್ಸವ ಕೋವಿಡ್ ಕಾರಣಕ್ಕೆ ಈ ಬಾರಿಯೂ ರದ್ದಾಗಿದೆ. ಜತೆಗೆ ಆಷಾಢ ಶುಕ್ರವಾರಗಳಂದು ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.
ಕಿಡಿಗೇಡಿಯೊಬ್ಬನ ಕೃತ್ಯಕ್ಕೆ 2017ರಲ್ಲಿ ಚಾಮರಾಜೇಶ್ವರ ರಥಕ್ಕೆ ಬೆಂಕಿ ಬಿದ್ದು ನೂತನ ರಥವಿಲ್ಲದೆ ರಥೋತ್ಸವ ನಿಂತಿತ್ತು. ಆದರೆ, ಕಳೆದ ವರ್ಷದಿಂದ ರಥೋತ್ಸವ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕೊರೊನಾ ಕಾರಣಕ್ಕೆ ಮುಗಿಯದ ಹಿನ್ನೆಲೆಯಲ್ಲಿ ಹಾಗೂ ದೇವಾಲಯ ಸಂಪ್ರೋಕ್ಷಣೆ ಆಗದಿರುವುದರಿಂದ ಈ ತಿಂಗಳ 23ರಂದು ನಡೆಯಬೇಕಿದ್ದ ರಥೋತ್ಸವ ರದ್ದಾಗಿದೆ.
ಚಾಮರಾಜೇಶ್ವರ ರಥೋತ್ಸವ ರದ್ದು.. ಕೋವಿಡ್ ಹಾವಳಿ ಇಲ್ಲದಿದ್ದರೆ, ಲಾಕ್‌ಡೌನ್ ಹೇರದಿದ್ದರೆ ರಥ ಸಿದ್ಧಗೊಳ್ಳುತ್ತಿತ್ತು. ಈಗ ದೇವಾಲಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದರಿಂದ ರಥ ಸಿದ್ಧವಾದರೂ ಜಾತ್ರೆ ನಡೆಯುವುದಿಲ್ಲ. ಹಾಗಾಗಿ, ಸತತ ಐದನೇ ವರ್ಷವೂ ಅಪರೂಪದ ಜಾತ್ರೆಯೊಂದು ರದ್ದಾಗಿದೆ. ಇನ್ನು, ಇದೇ 16, 23, 30 ಮತ್ತು ಆ. 6ರ ಆಷಾಢ ಶುಕ್ರವಾರಗಳಂದು ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಕಳೆದ ವರ್ಷವೂ ಆಷಾಢ ಶುಕ್ರವಾರಗಳಂದು ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ನವದಂಪತಿಗಳ ಜಾತ್ರೆ :ಆಷಾಢ ಮಾಸದಲ್ಲಿ ನಡೆಯುವ ಏಕೈಕ ಜಾತ್ರೆ ಇದಾಗಿದೆ. ಆಷಾಢ ಮಾಸದಲ್ಲಿ ದೂರವಾಗುವ ದಂಪತಿಗಳು ಈ ಜಾತ್ರೆಯಲ್ಲಿ ಸಂಧಿಸಿ, ಹಣ್ಣು-ಜವನ ಎಸೆಯುವುದು ಇಲ್ಲಿನ ವಿಶೇಷ. ದೂರವಿರುವ ನವ ಜೋಡಿಗಳನ್ನು ಕೂಡಿಸುವ ಜಾತ್ರೆ ಇದಾಗಿರುವುದರಿಂದ ಜೊತೆಗೆ ನವ ದಂಪತಿಗಳ ಇಷ್ಟಾರ್ಥ ಸಿದ್ಧಿಸುವ ನಂಬಿಕೆ ಇರುವುದರಿಂದ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯ- ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದರು.