ಚಾಮರಾಜನಗರ:ಪಿಆರ್ ಸಮೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಚಾಮರಾಜನರ ಈಗ ಬೆಳೆ ಸಮೀಕ್ಷೆಯಲ್ಲೂ ನಂ1 ಆಗಿದೆ.
ಕಳೆದ 8 ರಂದು ಬೆಳೆ ಸಮೀಕ್ಷೆಯಲ್ಲಿ 26ನೇ ಸ್ಥಾನದಲ್ಲಿದ್ದ ಚಾಮರಾಜನಗರ 16 ದಿನದ ಬಳಿಕ ಅಂದರೆ ಇಂದು ಎಲ್ಲ ಜಿಲ್ಲೆಗಳಿಗಿಂತ ವೇಗವಾಗಿ ಬೆಳೆ ಸಮೀಕ್ಷೆ ಮುಗಿಸುವ ಹಂತದಲ್ಲಿದೆ. 26 ನೇ ಸ್ಥಾನದಿಂದ 22ಕ್ಕೆ ಜಿಗಿತು. ಅದಾದ ಬಳಿಕ 15 ನಂತರ 8 ನೇ ಸ್ಥಾನ, 4, ಬುಧವಾರ 2 ಸ್ಥಾನದಲ್ಲಿದ್ದ ಚಾಮರಾಜನಗರ ಇಂದು ನಂ1 ಸ್ಥಾನಕ್ಕೇರಿದೆ. ದಿನಕ್ಕೆ ಸರಾಸರಿ 24 ಸಾವಿರ ಜಮೀನುಗಳನ್ನು ಅಪ್ಲೋಡ್ ಮಾಡುತ್ತಿದ್ದು, ಇನ್ನು ಕೇವಲ 58 ಸಾವಿರ ಜಮೀನುಗಳು ಬಾಕಿ ಇವೆ.
ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಟಿ.ಚಂದ್ರಕಲಾ ಈಟಿವಿ ಭಾರತದೊಂದಿಗೆ ಮಾತನಾಡಿ, 4, 22, 386 ಪ್ಲಾಟ್ಗಳಲ್ಲಿ ಈಗಾಗಲೇ ಪಿಆರ್ ಆ್ಯಪ್ ಮೂಲಕ ಶೇ. 63.16 ಹಾಗೂ ರೈತರ ಆ್ಯಪ್ ಮೂಲಕ ಶೇ. 23.07 ಸೇರಿದಂತೆ ಒಟ್ಟು ಶೇ.86.25 ರಷ್ಟು ಬೆಳೆ ಸಮೀಕ್ಷೆ ಮುಕ್ತಾಯವಾಗಿದೆ. ರೈತರ ಪರವಾಗಿ ಖಾಸಗಿ ನಿವಾಸಿಗಳು ಮಾಡುವ ಸರ್ವೇಯಲ್ಲಿ ಕಳೆದ ವಾರ ನಮ್ಮ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈಗ, ಒಟ್ಟಾರೆ ಬೆಳೆ ಸಮೀಕ್ಷೆಯಲ್ಲೂ ನಾವು ಮೊದಲ ಸ್ಥಾನದಲ್ಲಿದ್ದು, ವಿಜಯಪುರ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 463 ಮಂದಿ ಪಿಆರ್ಗಳಿದ್ದು, ರೈತರ ಪರವಾಗಿ ಇವರೇ ಬೆಳೆ ಸಮೀಕ್ಷೆಯನ್ನು ನಡೆಸಿ ಅಪ್ಲೋಡ್ ಮಾಡಲಿದ್ದಾರೆ. ಪಿಆರ್ ಆ್ಯಪ್ ಬಿಡುಗಡೆಯಾದ ಬಳಿಕ 2.66 ಲಕ್ಷ ಜಮೀನುಗಳನ್ನು ಸರ್ವೇ ಮಾಡಲಾಗಿದೆ. ಅಧಿಕಾರಿಗಳು ನಡೆಸುವ ಮೇಲ್ವಿಚಾರಣೆ ಸಮೀಕ್ಷೆಯಲ್ಲೂ ಉತ್ತಮ ವೇಗವಿದ್ದು, ನಾವೇ ಮೊದಲಿದ್ದೇವೆ. ಇನ್ನೆರಡು ದಿನಗಳಲ್ಲಿ ಸಮೀಕ್ಷೆಯೇ ಪೂರ್ಣವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.