ಚಾಮರಾಜನಗರ: ಎಲ್ಲಾ ಆದ ನಂತರ ಪೊಲೀಸರು ತಡವಾಗಿ ಬರುತ್ತಾರೆ ಎಂಬ ಅಪವಾದಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸರು ವಿರುದ್ಧ ನಡೆ ತೋರಿದ್ದಾರೆ. ಕರೆ ಮಾಡಿದ ಸರಾಸರಿ 18 ನಿಮಿಷದಲ್ಲೇ ಸೇವೆ ನೀಡುತ್ತಿರುವ ಮೂಲಕ ಕ್ಷಿಪ್ರ ಅವಧಿಯಲ್ಲಿ ಜನರ ರಕ್ಷಣೆಗೆ ಧಾವಿಸುತ್ತಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಜನವರಿಯಿಂದ ಮಾರ್ಚ್ ವರೆಗಿನ ERSS-112 ತುರ್ತು ಸಹಾಯವಾಣಿ ಅಂಕಿ ಅಂಶದ ಪ್ರಕಾರ, ಇಡೀ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸರು ದೂರಿದಾರರು ಕರೆ ಮಾಡಿದ ಸರಾಸರಿ 18.20 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತೆರಳಿ ಸ್ಪಂದಿಸುತ್ತಿದ್ದಾರೆ. ರಾಯಚೂರು ಜಿಲ್ಲೆ ಸರಾಸರಿ 18.27 ನಿಮಿಷದಲ್ಲಿ ಸ್ಪಂದಿಸುವ ಮೂಲಕ ಎರಡನೇ ಸ್ಥಾನ, ಮಹಾನಗರಗಳ ಪೈಕಿ ಬೆಂಗಳೂರು ಸಿಟಿ ಪೊಲೀಸರು ಮೊದಲನೇ ಸ್ಥಾನ, ಮೈಸೂರು ಎರಡನೇ ಸ್ಥಾನದಲ್ಲಿದೆ.
ಕೌಟಂಬಿಕ ಕಲಹ, ಅಪಘಾತ ಎಲ್ಲದಕ್ಕೂ ಸ್ಪಂದನೆ: ಕುಡಿದು ಗಲಾಟೆ, ಅಪಘಾತ, ಕೌಟಂಬಿಕ ಕಲಹ, ಶಬ್ಧ ಮಾಲಿನ್ಯ, ಕಳ್ಳತನ, ಆತ್ಮಹತ್ಯೆಗೆ ಯತ್ನ ಹೀಗೆ ನಾನಾ ರೂಪದ ಸಮಸ್ಯೆ, ಅವಘಡಗಳಿಗೆ ಸ್ಪಂದಿಸಲು ಜಿಲ್ಲೆಯಲ್ಲಿ 10 ವಾಹನಗಳು ಕಾರ್ಯ ನಿರ್ವಹಿಸುತ್ತಿದೆ. ಕೆಲವೊಮ್ಮೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದವರನ್ನು ಈಆರ್ಎಸ್ಎಸ್ ಪೊಲೀಸರು ರಕ್ಷಿಸಿದ್ದಾರೆ. ಕೋವಿಡ್ ಜಾಗೃತಿ ಮೂಡಿಸಿದ್ದಾರೆ. ಕೊಲೆ, ದರೋಡೆ, ಅಕ್ರಮ ಮದ್ಯ ಮಾರಾಟ, ಮಹಿಳೆ ಮತ್ತು ಹಿರಿಯ ನಾಗರಿಕರ ರಕ್ಷಣೆಯನ್ನೂ ಮಾಡುವ ಮೂಲಕ ಪೊಲೀಸರು ಮತ್ತಷ್ಟು ಜನಸ್ನೇಹಿಯಾಗಿದ್ದಾರೆ.