ಚಾಮರಾಜನಗರ : ಬೆಂಗಳೂರಿನ ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜು.3ರಂದು ಸಂಜೆ 7ರಿಂದ 7.30ರವರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಬುಡಕಟ್ಟು ಜನಾಂಗದವರ ಸಂವಾದ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಜೇನುಕುರುಬ, ಕೊರಗ ಸಮಾಜದವರನ್ನು ಆಯ್ಕೆ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯಿಂದ ಗುಂಡ್ಲುಪೇಟೆಯ ಮೂವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ತಿಳಿಸಿದ್ದಾರೆ.
ಅಲ್ಲದೆ ಜು.3ರಂದು ನಡೆಯಲಿರುವ ಸಂವಾದಕ್ಕೆ ಚಾಮರಾಜನಗರ ಜಿಲ್ಲೆ ಸೇರಿದಂತೆ ಮೈಸೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಬುಡಕಟ್ಟು ಜನಾಂಗದವರನ್ನು ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿರುವ ನೈಜ ದುರ್ಬಲ ಸಮುದಾಯಗಳಾದ ಜೇನುಕುರುಬ, ಕೊರಗ ಸಮಾಜದ ಕೆಲವರನ್ನು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಆಯ್ಕೆ ಮಾಡಿದೆ. ಹೀಗಾಗಿ ಆಯಾ ಜಿಲ್ಲೆಗಳ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದೆ.
ಗುಂಡ್ಲುಪೇಟೆಯ ಜೇನುಕುರುಬರು ಆಯ್ಕೆ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಲು ಗುಂಡ್ಲುಪೇಟೆಯ ಮೂವರು ಜೇನು ಕುರುಬರನ್ನು ಆಯ್ಕೆ ಮಾಡಲಾಗಿದೆ. ದೇಶಿಪುರ ಕಾಲನಿಯ ಸಿದ್ದಮ್ಮ, ಪುಟ್ಟಮ್ಮ, ಮದ್ದೂರು ಕಾಲನಿಯ ಗೋವಿಂದ ಆಯ್ಕೆಯಾಗಿದ್ದಾರೆ. ಹಾಗೇ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಬಸಮ್ಮ, ರಾಜೇಶ್, ಅಯ್ಯಪ್ಪ, ಭೈರಾ, ಸಿ.ಭಾಸ್ಕರ, ಪುಟ್ಟಬಸವಯ್ಯ, ಹುಣಸೂರಿನ ಜೆ. ಪಿ. ಪಾರ್ವತಿ, ಸುಮಾ, ರಾಜಪ್ಪ, ಸಚಿನ್, ಪಿರಿಯಾಪಟ್ಟಣದ ಜಯಮ್ಮ, ಗೌರಿ, ಲಕ್ಷ್ಮೀ, ಜಾನಕಮ್ಮ, ಬಸವಣ್ಣ, ಬಸಪ್ಪ, ಸರಗೂರಿನ ವಿಜಯ್ ಅವರನ್ನು ಆಯ್ಕೆ ಮಾಡಲಾಗಿದೆ.