ಚಾಮರಾಜನಗರ: ನಾಲ್ಕು ಮರಿಗಳನ್ನು ಬಿಟ್ಟು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಹುಲಿ ಇರುವಿಕೆ ಪತ್ತೆಯಾಗಿದ್ದು, ಅದರ ಚಲನವಲನ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವಲಯದ ಬಡಗಲಪುರ ಹಳ್ಳದ ಆನೆ ಕಂದಕ ಬಳಿ ತಾಯಿ ಹುಲಿಯು ಗೋಚರವಾಗಿದೆ. ಅಲ್ಲದೇ, ಮರಿಗಳನ್ನು ಬಿಟ್ಟುಹೋಗಿದ್ದ ಪ್ರದೇಶದ ಬಳಿಯೂ ಕೂಡ ಹುಲಿ ಪ್ರತ್ಯಕ್ಷವಾಗಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಬಂಡೀಪುರ ಸಿಎಫ್ಒ ನಟೇಶ್ ತಿಳಿಸಿದ್ದಾರೆ.
ಓದಿ:ಮತ್ತೊಂದು ಹುಲಿ ಮರಿ ಮೃತದೇಹ ಪತ್ತೆ: ತಾಯಿ ಹುಲಿಗಾಗಿ ಮುಂದುವರಿದ ಕೂಂಬಿಂಗ್..!
ಮರಿಗಳನ್ನು ಬಿಟ್ಟು ಹೋಗಲು ನಿಖರ ಕಾರಣ ತಿಳಿದು ಬಂದಿಲ್ಲ. ಮರಿಗಳಲ್ಲಿ ಸೋಂಕು ಕಾಣಿಸಿರಬಹುದು, ಇಲ್ಲವೇ ಗಂಡು ಹುಲಿಯು ತಾಯಿ ಹುಲಿಯನ್ನು ತೆರಳಲು ಬಿಡದಿರಬಹುದು ಅಥವಾ ಆಹಾರ ಸಿಗದಿರಬಹುದು. ಹೀಗೆ ಅನೇಕ ಕಾರಣಗಳಿರಬಹುದು. ನೋಡಲು ಹುಲಿ ಆರೋಗ್ಯವಾಗಿದೆ. ಹುಲಿಯ ಮೇಲೆ ನಿಗಾವಷ್ಟೇ ಇರಿಸಲಿದ್ದು, ಸೆರೆ ಹಿಡಿಯುವುದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಓದಿ:ನುಗು ವನ್ಯಜೀವಿ ವಿಭಾಗದಲ್ಲಿ ಮೂರು ಹುಲಿಮರಿ ಪತ್ತೆ; ಹಸಿವಿನಿಂದ ಎರಡು ಸಾವು
4 ದಿನಗಳ ಹಿಂದೆಯಷ್ಟೇ 4 ಹುಲಿ ಮರಿಗಳು ಪತ್ತೆಯಾಗಿ ಅವುಗಳಲ್ಲಿ ಮೂರು ಹಸಿವಿನಿಂದ ಮೃತಪಟ್ಟಿದ್ದವು. ಒಂದು ಗಂಡು ಹುಲಿಮರಿ ಮಾತ್ರ ಮೈಸೂರು ಮೃಗಾಲಯದಲ್ಲಿ ಚೇತರಿಸಿಕೊಳ್ಳುತ್ತಿದೆ.